ನೇಜಾರು ನಾಲ್ವರ ಹತ್ಯಾ ಪ್ರಕರಣ; ಹಂತಕ ಪ್ರವೀಣ್ ಚೌಗಲೆಯ ಹಿನ್ನೆಲೆ ಕೆದಕುತ್ತ ಹೋದಂತೆ ಹೊರಬೀಳುತ್ತಿದೆ ಭಯಾನಕ ವಿಚಾರಗಳು
ಮಂಗಳೂರು: ಉಡುಪಿಯ ನೇಜಾರಿನ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆಯ ಹಿನ್ನೆಲೆಯನ್ನು ಕೆದಕುತ್ತ ಹೋದಂತೆ ಒಂದೊಂದೇ ಭಯಾನಕ ವಿಚಾರಗಳು ಹೊರಬರುತ್ತಿದೆ.
ಬಹಳ ಯೋಜಿತವಾಗಿ ಈ ಕೃತ್ಯ ಎಸಗಿರುವ ಪ್ರವೀಣ್ ಅರುಣ್ ಚೌಗುಲೆ, ತಾನು ಮಾಡಿರುವ ಹತ್ಯೆಗೆ ಯಾವುದೇ ಸುಳಿವು ಸಿಗದಂತೆ ಮಾಡಿದ್ದರೂ, ಪೋಲೀಸರ ಚುರುಕಿನ ತನಿಖೆಯಿಂದ ಹಂತಕ ಪೋಲೀಸರ ಬಲೆಗೆ ಬಿದ್ದಿದ್ದು, ತನಿಖೆ ಮುಂದುವರಿಯುತ್ತಿದೆ.
ತಾಯಿ ಹಸೀನಾ (51) ಕಿಚನ್ ಪಕ್ಕದ ಕೋಣೆ, ಬಾತ್ ರೂಮಲ್ಲಿಅಫ್ನಾನ್(23), ಬೆಡ್ ರೂಮಲ್ಲಿ ಗಗನಸಖಿ ಐನಾಜ್ (21) ಹಾಗೂ ಆಟವಾಡಿ ಅಂಗಳದಲ್ಲಿ ಸೈಕಲನ್ನು ಬಿಟ್ಟು ಬಂದ ಆಸೀಮ್ (13) ಹಾಲ್‌ನಲ್ಲಿ ಚಾಕು ಇರಿತಕ್ಕೊಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇವರನ್ನೆಲ್ಲ ಪಕ್ಕ ಮಾಸ್ಟರ್ ಪ್ಲಾನ್ ಮಾಡಿಯೇ ಹಂತಕ ಪ್ರವೀಣ್ ಚೌಗುಲೆ ಮುಗಿಸಿದ್ದು, ಯಾವುದೇ ಸುಳಿವು ಸಿಗದಂತೆ ನೋಡಿ ಕೊಂಡಿದ್ದ.
ಕೆಲಸದ ವೇಳೆ ಆತ್ಮ ರಕ್ಷಣೆ ಸಹಿತ ಅನ್ಯರನ್ನು ಮಟ್ಟಹಾಕಲು ನೀಡಿದ ತರಬೇತಿಯ ಜೊತೆಗೆ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಹಲವು ರೀತಿಯ ತರಬೇತಿ ಪಡೆದಿದ್ದ ಆರೋಪಿ ಚೌಗುಲೆ, ಚಾಕುವಿನಿಂದಲೇ ಎಲ್ಲ ಅಮಾಯಕ ತಾಯಿ ಹಾಗು ಆಕೆಯ ಮಕ್ಕಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದ.
ಏರ್ ಇಂಡಿಯಾ ಕ್ಯಾಬಿನ್ ಕ್ರೂ ಉದ್ಯೋಗಿಯಾಗಿರುವ ಪ್ರವೀಣ್ ಚೌಗುಲೆ ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಗೂ ಪ್ರತಿನಿತ್ಯ ಚಿತ್ರ ಹಿಂಸೆ ನೀಡುತ್ತಿದ್ದ. ಆಕೆಯನ್ನು ಅನುಮಾನದಿಂದಲೇ ನೋಡುತ್ತಿದ್ದ ಚೌಗುಲೆ ಸಣ್ಣ ಪುಟ್ಟ ವಿಷಯಗಳಲ್ಲೂ ಕ್ರೋಧಗೊಂಡು ಎರಡು ಬಾರಿ ತನ್ನ ಪತ್ನಿಯ ಕೊಲೆ ಮಾಡಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.
ಏರ್ ಇಂಡಿಯಾ ಕ್ಯಾಬಿನ್ ಕ್ರೂ ಉದ್ಯೋಗಿಯಾಗಿರುವ ಹಂತಕ ಚೌಗುಲೆ, ಐಷಾರಾಮಿ ಜೀವನ ನಡೆಸುತ್ತಿದ್ದು, ಮಂಗಳೂರಿನ ಕೆಪಿಟಿ ಬಳಿ ಫ್ಲ್ಯಾಟ್, ಮಂಗಳೂರಿನಲ್ಲಿ2 ನಿವೇಶನ, ಸುರತ್ಕಲ್‌ನಲ್ಲಿ ಸ್ವಂತ ಮನೆ ಸೇರಿದಂತೆ ಅಪಾರ ಆಸ್ತಿಪಾಸ್ತಿಯನ್ನು ಚೌಗುಲೆ ಹೊಂದಿದ್ದಾನೆ ಎಂದು ಹೇಳಲಾಗಿತ್ತಿದೆ.
ವಿದೇಶದಿಂದ ಬರುವ ಮಾದಕ ವಸ್ತು, ಅಕ್ರಮ ಚಿನ್ನ ಸಾಗಾಟ ಜಾಲದ ನಂಟು ಪ್ರವೀಣ್ ಹೊಂದಿದ್ದಾನೆಯೇ ಎಂಬ ಬಗ್ಗೆ ಸಮಗ್ರ ತನಿಖೆಯಿಂದಷ್ಟೇ ಹೊರಬರಬೇಕಾಗಿದ್ದು, ವಿದೇಶಕ್ಕೆ ಹಾರಾಟ ಮಾಡುವ ವಿಮಾನದಲ್ಲಿ ಉದ್ಯೋಗಿಯಾಗಿದ್ದು ಕೊಂಡು ಈ ಅಕ್ರಮ ಚಟುವಟಿಕೆಗಳಿಗೆ ಹಂತಕ ಬೆಂಬಲ ನೀಡುತ್ತಿದ್ದಾನೆ ಎಂಬುದು ಕೂಡ ಪೋಲೀಸರ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
ನ.12ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಆರೋಪಿ ಪ್ರವೀಣ್ ಚೌಗುಲೆ, ಮಂಗಳೂರಿನ ಮನೆಯಿಂದ ತನ್ನ ಕಾರಿನಲ್ಲಿ ಹೊರಟು ಹೆಜಮಾಡಿಯ ಟೋಲ್‌ಗೇಟ್‌ನಲ್ಲಿ ತನ್ನ ಕಾರು ಹಾದು ಹೋದರೆ ಸಿಸಿಟಿವಿ ಮೂಲಕ ತನ್ನ ಹೆಜ್ಜೆ ಪೊಲೀಸರಿಗೆ ದೊರೆಯುತ್ತದೆ ಎಂಬುದನ್ನು ಅರಿತು ಟೋಲ್‌ಗೇಟ್ ಬಳಿ ಇಟ್ಟು, ಬಸ್ಸು, ರಿಕ್ಷಾ, ಬೈಕ್ ಮೂಲಕ ನೇಜಾರಿನ ತೃಪ್ತಿ ಲೇಔಟ್‌ಗೆ ತೆರಳಿ, ಸಹೋದ್ಯೋಗಿ ಅಯ್ನಾಜ್ ಹಾಗೂ ಅವರ ಕುಟುಂಬದ ಹಸೀನಾ, ಅಫ್ನಾನ್, ಅಸೀಮ್ ಅವರನ್ನು ಕೊಲೆ ಮಾಡಿ, ಏನೂ ಆಗದ ರೀತಿಯಲ್ಲೇ ಇದ್ದು, ಮನೆಗೆ ತೆರಲಿದ್ದ. ಅಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಕೈಗಾದ ಗಾಯಕ್ಕೆ ಚಿಕಿತ್ಸೆ ಪಡೆದು, ಪತ್ನಿ ಮಕ್ಕಳನ್ನು ಮಾರನೇ ದಿನ ಬೆಳಗಾವಿಯ ಕುಡುಚಿಗೆ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು ದೀಪಾವಳಿ ಆಚರಿಸಿದ್ದ. ನ.16ರಂದು ತನ್ನ ಬಳಿ ಇದ್ದ ಮೊಬೈಲನ್ನು ಆನ್ ಮಾಡಿದ್ದು, ಈ ವೇಳೆ ಹುಡುಕಾಟ ನಡೆಸುತ್ತಿದ್ದ ಪೋಲೀಸರ ಬಲೆಗೆ ಬಿದ್ದಿದ್ದಾನೆ.
ಈಗ ಪೊಲೀಸ್ ಕಸ್ಟಡಿಯಲ್ಲಿರುವ ಪ್ರವೀಣ್ ಚೌಗಲೆಯ ವಿಚಾರಣೆ ಮುಂದುವರಿದಿದೆ. ಈತ ಏಳೆಂಟು ತಿಂಗಳ ಹಿಂದೆ ಸುಮಾರು ₹18 ಲಕ್ಷ ಮೌಲ್ಯದ ಹೊಸ ಕಾರನ್ನು ಖರೀದಿಸಿರುವ ಮಾಹಿತಿ ಲಭ್ಯವಾಗಿದ್ದು, ಕ್ಯಾಬಿನ್ ಸಿಬ್ಬಂದಿ ಆಗಿದ್ದ ಆತನ ಬಳಿ ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ. ಆತನ ವ್ಯವಹಾರಗಳು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.