
ನಾವು ಪಾಕ್ ಪರ ಘೋಷಣೆ ಕೂಗಿಲ್ಲ; ವಿಚಾರಣೆಯ ವೇಳೆ ತಪ್ಪೊಪ್ಪಿಕೊಳ್ಳಲು ನಿರಾಕರಿಸುತ್ತಿರುವ ಬಂಧಿತರು
ಬೆಂಗಳೂರು: ವಿಧಾನಸೌಧದೊಳಗೆ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಮೂವರು ಆರೋಪಿಗಳು ಪೋಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆನ್ನಲಾಗಿದೆ.
ಬಂಧಿತ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ (35), ಬೆಂಗಳೂರಿನ ಜಯಮಹಲ್‌ನ ಮುನಾವರ್ ಅಹಮದ್ (29) ಹಾಗು ದೆಹಲಿಯ ಕೃಷ್ಣಗಂಜ್‌ನ ಮೊಹಮ್ಮದ್ ಇಲ್ತಾಜ್ (31) ಎಂಬುವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮೂವರೂ ವಿಚಾರಣೆ ವೇಳೆ ನಾವು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿಲ್ಲ. ನಮ್ಮ ನಾಯಕನ ಪರವಾಗಿ ಅಷ್ಟೇ ಘೋಷಣೆ ಕೂಗಿದ್ದೇವೆಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಫೆ.27ರಂದು ನಮ್ಮ ನಾಯಕನ ಗೆಲುವಿನ ಸಂಭ್ರಮಾಚರಣೆಗಾಗಿಯೇ ನಾವು ವಿಧಾನಸೌಧಕ್ಕೆ ಬಂದಿದ್ದೆವು. ನಾಸೀರ್ ಅವರ ಗೆಲುವು ಹಿನ್ನೆಲೆಯಲ್ಲಿ ನಾಸೀರ್ ಸಾಬ್ ಜಿಂದಾಬಾದ್ ಮತ್ತು ನಾಸೀರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದೆವು. ಆದರೆ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಲ್ಲ. ನಾವು ಅಂತಹ ದೇಶವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಸ್ಥಳದಲ್ಲಿದ್ದ ಯಾರೂ ಕೂಡ ಘೋಷಣೆ ಕೂಗಿಲ್ಲ, ಯಾರಾದರೂ ಅಂತಹ ಘೋಷಣೆಗಳನ್ನು ಕೂಗಿದ್ದರೆ, ಕಠಿಣ ಶಿಕ್ಷೆಯಾಗಬೇಕು ಮೊಹಮ್ಮದ್ ಶಫಿ ನಾಶಿಪುಡಿ ಹೇಳಿದ್ದಾರೆಂದು ವರದಿಗಳು ತಿಳಿಸಿವೆ.
ನಾನು 100 ಕೋಟಿ ರೂಗಳ ಒಡೆಯನಾಗಿದ್ದು, ಬ್ಯಾಡಗಿಯಲ್ಲಿ ಅಂತರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಹೊಂದಿದ್ದೇನೆ. ಇಂತಹ ಘೋಷಣೆಗಳನ್ನು ಕೂಗಿದರೆ ಪರಿಣಾಮ ಏನಾಗುತ್ತದೆ ಎಂಬ ಅರಿವು ನನಗಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಮೂಲಕ ಸ್ಫರ್ಧೆಗಿಳಿಯಲು ಬಯಸಿದ್ದೇನೆಂದು ಹೇಳಿಕೊಂಡಿದ್ದಾರೆ.
ಪ್ರಕರಣ ಸಂಬಂಧ ಮೂವರನ್ನು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ದರ್ಜೆಯ ಅಧಿಕಾರಿಯೊಬ್ಬರು ವಿಚಾರಣೆ ನಡೆಸುತ್ತಿದ್ದು, ಮೂವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಇನ್ನು ಮತ್ತಿಬ್ಬರು ಆರೋಪಿಗಳಾದ ಮುನಾವರ್ ಅಹಮದ್ ಮತ್ತು ಇಲ್ತಾಜ್ ತಾವು ಕೇವಲ ಕಾಂಗ್ರೆಸ್ ಕಾರ್ಯಕರ್ತರು ಎಂದು ಹೇಳಿಕೊಂಡಿದ್ದಾರೆ. ಇಬ್ಬರಿಂದಲೂ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಡಿಸಿಪಿ (ಕೇಂದ್ರ) ಎಚ್‌ಟಿ ಶೇಖರ್ ತಿಳಿಸಿದ್ದಾರೆ.
ಈ ಹಿಂದೆ ಆರ್‌ಟಿ ನಗರದಲ್ಲಿದ್ದ ಮುನಾವರ್ ಅಹಮದ್ ಇತ್ತೀಚೆಗೆ ಜಯಮಹಲ್ ಕಡೆಗೆ ಸ್ಥಳಾಂತರಗೊಂಡಿದ್ದ. ಈತ ಮೊಹಮ್ಮದ್ ಶಫಿ ನಾಶಿಪುಡಿ ಆತ್ಮೀಯ ಸ್ನೇಹಿತನಾಗಿದ್ದಾನೆಂದು ಹೇಳಲಾಗುತ್ತಿದೆ. ಸಂಸದನಾಗಿ ನಾಸೀರ್ ಅವರು ಆಯ್ಕೆಯಾಗ ಹಿನ್ನೆಲೆಯಲ್ಲಿ ಸ್ನೇಹಿತನೊಂದಿಗೆ ವಿಜಯವನ್ನು ಆಚರಿಸಲು ವಿಧಾನಸೌಧಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.
ನಾನು ದೆಹಲಿಯಲ್ಲಿ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದು, ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದೇನೆ. ಹುಸೇನ್ ಅವರ ಅನುಯಾಯಿಯಾಗಿದ್ದು, ನಾಯಕನ ವಿಜಯವನ್ನು ಆಚರಿಸಲು ಬೆಂಗಳೂರಿಗೆ ಬಂದಿದ್ದೆಎಂದು ಇಲ್ತಾಜ್ ಪೊಲೀಸರಿಗೆ ತಿಳಿಸಿದ್ದಾನೆಂದು ವರಿದಿಗಳು ತಿಳಿಸಿವೆ.