ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ; ಫೈನಲಿನಲ್ಲಿ ಕುಂದಾಪುರ ತಂಡದ ವಿರುದ್ಧ ಗೆದ್ದುಬೀಗಿದ ಉಡುಪಿ ತಂಡ
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಯಾಗಿರುವ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ರಜತ ಮಹೋತ್ಸವದ ಪ್ರಯುಕ್ತ ಮಂಗಳವಾರ ಹೆಜಮಾಡಿಯ ರಾಜೀವ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಉಡುಪಿ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.
ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ, ಕಾಪು, ಕಾರ್ಕಳ, ಕುಂದಾಪುರ ಹಾಗೂ ಬ್ರಹ್ಮಾವರ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಉಡುಪಿ ಮತ್ತು ಕುಂದಾಪುರ ತಂಡಗಳು ಅತೀ ಹೆಚ್ಚು ಅಂಕಗಳನ್ನು ಗಳಿಸಿ ಫೈನಲ್ ಪ್ರವೇಶಿಸಿದವು.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಉಡುಪಿ ತಂಡವು ಬ್ಯಾಟಿಂಗ್ ಆರಿಸಿ ಕೊಂಡಿತು. ಒಟ್ಟು ಐದು ಓವರ್‌ಗಳಲ್ಲಿ 37ರನ್ ಕಳೆ ಹಾಕಿದ ಉಡುಪಿ ತಂಡವು ಎದುರಾಳಿ ಕುಂದಾಪುರ ತಂಡಕ್ಕೆ 38ರನ್‌ಗಳ ಗುರಿ ನೀಡಿತು. ತೀವ್ರ ಸೆಣಸಾಟದಲ್ಲಿ ಉಡುಪಿ ತಂಡವು ಕುಂದಾಪುರ ತಂಡವನ್ನು ಐದು ರನ್‌ಗಳಲ್ಲಿ ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಕುಂದಾಪುರ ತಂಡವು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಉಡುಪಿ ತಂಡದ ಯತೀಶ್ ತಿಂಗಳಾಯ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಕುಂದಾಪುರ ತಂಡದ ಸಂತೋಷ್ ಕುಂದೇಶ್ವರ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಕುಂದಾಪುರ ತಂಡದ ಹರೀಶ್ ಕುಂದಾಪುರ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಉಡುಪಿ ತಂಡದ ರಾಘವೇಂದ್ರ ಪಡೆದುಕೊಂಡರು.