ರಾಮೇಶ್ವರಂ ಕೆಫೆ ಬಾಂಬರ್ ತಮಿಳಿಗ ಎಂದ ಶೋಭಾ ಕರದ್ಲಾಂಜೆ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ DMK
ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತ ಆರೋಪಿ ತಮಿಳಿಗ ಎಂದು ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರ ಸಚಿವೆ ಶೋಭಾ ಕರದ್ಲಾಂಜೆ ವಿರುದ್ದ ಕೇಂದ್ರ ಚುನಾವಣಾ ಆಯೋಗಕ್ಕೆ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದಿಂದ ದೂರು ನೀಡಲಾಗಿದೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ತಮಿಳಿಗರು ಇದ್ದಾರೆ ಎಂದು ನಿನ್ನೆ ನಗರ್ತಪೇಟೆಗೆ ಭೇಟಿ ನೀಡಿದ ವೇಳೆ ಸಂಸದೆ ಶೋಭಾ ಕರದ್ಲಾಂಜೆ ಹೇಳಿಕೆ ನೀಡಿದ್ದಾರೆ. ತಮಿಳುನಾಡು ಕರ್ನಾಟಕದ ಜನರ ಮಧ್ಯೆ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಹೀಗಾಗಿ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತಮಿಳುನಾಡಿನಲ್ಲಿ ತರಬೇತಿ ಪಡೆದು, ಬಾಂಬ್ ಇಡಲು ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಶಂಕಿತ ಬಂದಿದ್ದಾನೆ. ಎನ್ಐಎ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಎನ್ಐಎ ಇದುವರೆಗೂ ಯಾರನ್ನ ಬಂಧನ ಮಾಡಿಲ್ಲ ಎಂದು ತಿಳಿಸಲಾಗಿದೆ.
ಸಂಸದೆ ಶೋಭಾ ಕರದ್ಲಾಂಜೆ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದು ಕ್ಷೇಮೆ ಕೇಳಿದ್ದರು. ಈ ಕುರಿತಾಗಿ ಟ್ವೀಟ್ ಮಾಡಿದ್ದ ಅವರು, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಹಿಂದೆ ತಮಿಳಿಗರು ಇದ್ದಾರೆ ಎಂಬ ನನ್ನ ಹೇಳಿಕೆಯಿಂದ ತಮಿಳಿಗರಿಗೆ ನೋವಾಗಿದ್ದರೆ ನನ್ನ ಅಂತರಾಳದಿಂದ ನಾನು ಕ್ಷಮೆಯನ್ನು ಕೇಳುತ್ತೇನೆ. ಹಾಗೂ ನನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ ಎಂದಿದ್ದಾರೆ.
ಸಂಸದೆ ಶೋಭಾ ಕರದ್ಲಾಂಜೆ ಟ್ವೀಟ್...
ನನ್ನ ತಮಿಳು ಸಹೋದರ ಸಹೋದರಿಯರೆ, ನನ್ನ ಮಾತುಗಳು ಬೆಳಕು ಚೆಲ್ಲುವ ಉದ್ದೇವ ಹೊಂದಿದ್ದವು ಎಂಬುವುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಹೇಳಿಕೆ ಕೆಲವರಿಗೆ ನೋವು ತಂದಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಮಾತುಗಳು ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರ ಅನ್ವಯ ಎಂದು ಹೇಳಿದ್ದಾರೆ.