ತಾಳಿ ಬಗ್ಗೆ ಮಾತಾಡುವ ಮೋದಿಯವರೇ ನಿಮ್ಮ ಪ್ರಜ್ವಲ್ ಅದೆಷ್ಟು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತಂದಿದ್ದಾರೆಂಬ ಲೆಕ್ಕ ಇದೆಯೇ?: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: ತಾಳಿ ಬಗ್ಗೆ ಮಾತಾಡುವ ಮೋದಿಯವರೇ ನಿಮ್ಮ ಅಭ್ಯರ್ಥಿ ಪ್ರಜ್ವಲ್ ಅದೆಷ್ಟು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತಂದಿದ್ದಾರೆಂಬ ಲೆಕ್ಕ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಅಶ್ಲೀಲ ಹಾಸನದ ಸಂಸದ ಪ್ರಜ್ವಲ್ ರೇವಣ್ಣನವರ ವಿರುದ್ಧ ಕೇಳಿಬಂದಿರುವ ಆರೋಪ ಸಂಬಂಧ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ತಾಳಿ ಬಗ್ಗೆ ಮಾತಾಡುವ ಮೋದಿ ಅವರೇ, ನಿಮ್ಮ ಬಿಜೆಪಿ ಬೆಂಬಲಿತ NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅದೆಷ್ಟು ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ತಂದಿದ್ದಾರೆ ಎಂಬ ಲೆಕ್ಕ ಸಿಕ್ಕಿದೆಯೇ? ಮಹಿಳೆಯರ ಮಾಂಗಲ್ಯದ ಪಾವಿತ್ರ್ಯವನ್ನು ಬೀದಿ ಹರಾಜು ಹಾಕಿದ್ದು ನಿಮಗೆ ದೊಡ್ಡ ವಿಷಯ ಅನಿಸಲಿಲ್ಲವೇ? ಮಹಿಳೆಯರ ಮಾನ ಹರಾಜು ಹಾಕುವವರೇ ಮೋದಿ ಪರಿವಾರದವರಾಗಿದ್ದಾರೆಯೇ? ಎಂದು ಪ್ರಶ್ನಿಸಿದೆ.
ಹಾಸನದಲ್ಲಿ ಸಾವಿರಾರು ಮಹಿಳೆಯರ ಬದುಕು, ಗೌರವ ಮಣ್ಣುಪಾಲಾಗಿದೆ. ಕಂಡು ಕೇಳರಿಯದ ವಿಕೃತಿಯಿಂದ ಮಹಿಳೆಯರು ಸಂತ್ರಸ್ತರಾಗಿದ್ದಾರೆ. ಈಗ ಏಕೆ ಬಿಜೆಪಿಗರು ಮೌನವಹಿಸಿದ್ದಾರೆ? ಜೆಪಿ ನಡ್ಡಾ, ಬೊಮ್ಮಾಯಿ, ವಿಜಯೇಂದ್ರ, ಸಿಟಿ ರವಿ, ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಅವರೇ, ಹಾಸನದ ಸಂತ್ರಸ್ತೆಯರ ಮನೆಗೆ ಭೇಟಿ ನೀಡುವುದು ಯಾವಾಗ? ಸಂತ್ರಸ್ತರಿಗೆ ಸಾಂತ್ವಾನ ಹೇಳುವುದು ಯಾವಾಗ? ಹಾಸನದಲ್ಲಿ ಪ್ರಜ್ವಲ್ ರೇವಣ್ಣನಿಂದ ಸಂತ್ರಸ್ತರಾದ ಮಹಿಳೆಯರ ಬದುಕು, ಗೌರವ ಬಿಜೆಪಿಗೆ ಮುಖ್ಯವಲ್ಲವೇ? ಎಂದು ವ್ಯಂಗ್ಯವಾಡಿದೆ.