ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಕೆ; ನ್ಯಾಯಾಲಯದ ಮೆಟ್ಟಿಲೇರಿದ ಈಶ್ವರಪ್ಪ
ಬೆಂಗಳೂರು: ಬಿಜೆಪಿ ವಿರುದ್ಧ ಬಂಡಾಯವೆದ್ದಿರುವ ಕೆಎಸ್. ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿರುವ ವಿಚಾರ ಇದೀಗ ವಿವಾದಕ್ಕೆಡೆಮಾಡಿದ್ದು, ಈ ವಿಚಾರವನ್ನಿಟ್ಟುಕೊಂಡು ಈಶ್ವರಪ್ಪ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈಶ್ವರಪ್ಪ ಪ್ರಚಾರದ ವೇಳೆ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ವ್ಯಂಗ್ಯವಾಡಿದ್ದರು.
ಈ ಹಿನ್ನೆಲೆಯಲ್ಲಿ ರಾಘವೇಂದ್ರ ಅವರಿಗೆ ತಿರುಗೇಟು ನೀಡಿದ್ದ ಈಶ್ವರಪ್ಪ, ಮೋದಿ ಅವರಪ್ಪನ ಆಸ್ತಿಯೇ, ಮೋದಿ ಭಾವಚಿತ್ರವನ್ನು ಯಾರಾದರೂ ಬಳಸಬಹುದು ಎಂದು ಹೇಳಿದ್ದರು. ಇದೀಗ ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೊರೆಹೋಗಿದ್ದಾರೆ. ಶುಕ್ರವಾರ ಕೆವಿಯಟ್ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಪುತ್ರ ಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್ ನೀಡದ್ದರಿಂದ ಬಂಡಾಯವೆದ್ದಿರುವ ಕೆಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಎದುರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಪ್ರಚಾರದಲ್ಲಿ ಬಿಜೆಪಿ ಚಿಹ್ನೆ ಹೊರತುಪಡಿಸಿ ಮೋದಿ ಭಾವಚಿತ್ರವನ್ನು ಈಶ್ವರಪ್ಪ ಬಳಸುತ್ತಿದ್ದಾರೆ.
ಇನ್ನು, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ ಅವರನ್ನು ಮನವೊಲಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಈಶ್ವರಪ್ಪ ಅವರ ಜೊತೆ ಮಾತನಾಡಿ, ದೆಹಲಿಗೆ ಬರುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ಕೆಎಸ್ ಈಶ್ವರಪ್ಪ ಅವರಿಗೆ ಅಮಿತ್ ಶಾ ಸಿಕ್ಕಿಲ್ಲ. ಆದ್ದರಿಂದ ನಿರಾಸೆಯಲ್ಲೇ ರಾಜ್ಯಕ್ಕೆ ವಾಪಸ್ ಆಗಿ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಕ್ಕೆ ಹೈಕಮಾಂಡ್ ನಾಯಕರ ಸಮ್ಮತಿ ಇರಬಹುದು. ಬಹಿರಂಗವಾಗಿ ಅಲ್ಲವಾದರೂ ಒಳಗಿಂದೊಳಗೆ ಅವರಿಗೆ ನಾನು ಬಂಡಾಯವಾಗಿ ಸ್ಪರ್ಧಿಸುವ ಬಗ್ಗೆ ಒಲವಿರಬಹುದು. ರಾಜ್ಯದಲ್ಲಿ ಅಪ್ಪ-ಮಕ್ಕಳ ಹಿಡಿತದಿಂದ ಪಕ್ಷವನ್ನು ಹೊರ ತರುವುದಕ್ಕಾಗಿ ಹೈಕಮಾಂಡ್ ನಾಯಕರು ನನ್ನ ಸ್ಪರ್ಧೆ ಬಗ್ಗೆ ಒಲವು ಹೊಂದಿರಬಹುದು ಎಂದು ಹೇಳಿದ್ದರು.