
ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನನ್ನೇ ಕೊಂದು ಹಾಕಿದ ತಮ್ಮ!
ಹೆಬ್ರಿ: ತಮ್ಮ ಹಾಗು ಅಣ್ಣನ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಗಿ ತಮ್ಮ ದೊಣ್ಣೆಯಿಂದ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಘಟನೆ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ರವಿವಾರ ನಡೆದಿದೆ.
ಮೃತರನ್ನು ನಾಲ್ಕೂರು ಗ್ರಾಮದ ಕಜ್ಕೆ ಅರಮನೆಜೆಡ್ಡು ನಿವಾಸಿ ಗುಲಾಬಿ ಎಂಬವರ ಮಗ ಮಂಜುನಾಥ (35) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ, ಮೃತರ ತಮ್ಮ ವಿಶ್ವನಾಥ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ ಒಂದೇ ಮನೆಯಲ್ಲಿ ವಾಸವಾಗಿದ್ದು, ಆಗಾಗ ಗಲಾಟೆ ಮಾಡುತ್ತಿದ್ದರು. ಮಧ್ಯರಾತ್ರಿ ವೇಳೆ ಮಂಜುನಾಥ, ತನ್ನ ತಮ್ಮ ವಿಶ್ವನಾಥನನ್ನು ಉದ್ದೇಶಿಸಿ, ನನ್ನ ಹೆಂಡತಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಹೇಳಿದನು. ಇದೇ ವಿಚಾರದಲ್ಲಿ ವಿಶ್ವನಾಥ ಕೋಪ ಗೊಂಡು ಛಾವಣಿಯಲ್ಲಿದ್ದ ದೊಣ್ಣೆಯಿಂದ ಮಂಜುನಾಥ ಅವರ ತಲೆಗೆ ಬಲವಾಗಿ ಹೊಡೆದನು ಎಂದು ದೂರಲಾಗಿದೆ.
ಇದರ ಪರಿಣಾಮ ಮಂಜುನಾಥ್ ಅವರ ತಲೆಯಿಂದ ತೀವ್ರ ರಕ್ತ ಹರಿದು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಹೆಬ್ರಿ ಪೊಲೀಸ್ ಠಾಣಾಧಿಕಾರಿ ಮಹೇಶ ಟಿ.ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.