ಆರ್‌ಎಸ್‌ಎಸ್-ಬಿಜೆಪಿ ವಿಷ ಇದ್ದಂತೆ; ಅದನ್ನ ಟೇಸ್ಟ್ ನೋಡಬೇಕು ಎಂದು ಪ್ರಯತ್ನಿಸಿದರೆ ಸಾವನ್ನಪ್ಪುತ್ತೀರಿ: ಎಚ್ಚರಿಕೆ ನೀಡಿದ ಖರ್ಗೆ
ನವದೆಹಲಿ: ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವು ವಿಷ ಇದ್ದಂತೆ, ಅದನ್ನ ಟೇಸ್ಟ್ ನೋಡಬೇಕು ಎಂದು ಪ್ರಯತ್ನಿಸಿದರೆ ಸಾವನ್ನಪ್ಪುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಐ.ಎನ್.ಡಿ.ಐ.ಎ ಒಕ್ಕೂಟ ಸಭೆಯಲ್ಲಿ ಮಾತನಾಡಿದ ಅವರು, ನಾವು ದೇಶಕ್ಕೆ ಸ್ವಾತಂತ್ರ್ಯ ಕೊಡಿಸಲು ರಕ್ತವನ್ನು ಹರಿಸಿದ್ದೇವೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಜೀವವನ್ನು ತೆತ್ತಿದ್ದಾರೆ. ಆರ್‌ಎಸ್‌ಎಸ್ ದೇಶಕ್ಕಾಗಿ ಏನು ಮಾಡಿದೆ? ಬ್ರಿಟಿಷರ ಪರವಾಗಿ ಸರ್ಕಾರಿ ನೌಕರಿ ಮಾಡುವಂತೆ ಹಾಗೂ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗದಂತೆ ಹೇಳುತ್ತಿತ್ತು ಎಂದಿದ್ದಾರೆ.
ನಾವು ಚುನಾವಣಾ ಪ್ರಚಾರ ಮಾಡದಂತೆ ತಡೆಯಲಾಗುತ್ತಿದೆ. ಪ್ರಜಾಪ್ರಭುತ್ವದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನ ಉಳಿಸಬೇಕು, ಸಂವಿಧಾನ ಉಳಿದರೆ ಮೀಸಲಾತಿ, ಬಡವರಿಗೆ ಹಕ್ಕುಗಳು ಲಭಿಸಲಿದೆ ಎಂದರು.
ಐಟಿ, ಇಡಿ ಸಿಬಿಐ ಬಳಸಿಕೊಂಡು ವಿರೋಧ ಪಕ್ಷ ಮಾತ್ರವಲ್ಲ ತಮ್ಮ ಮೈತ್ರಿ ಪಕ್ಷಗಳನ್ನು ಹೆದರಿಸುತ್ತಿದ್ದಾರೆ. ಬೆದರಿಸಿ ಶಾಸಕರು, ಸಂಸದರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ. ಮೋದಿಯವರು ತೊಲಗುವವರೆಗೂ ದೇಶದಲ್ಲಿ ಸಮೃದ್ಧಿ ಇರದು ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ಮೈತ್ರಿಗಾಗಿ ಹೇಮಂತ್ ಸೊರೇನ್‍ಗೆ ಮೋದಿಯಿಂದ ಆಹ್ವಾನ ಬಂದಿತ್ತು. ಮೈತ್ರಿ ಒಪ್ಪದೇ ಇರುವುದಕ್ಕೆ ಅವರನ್ನು ಬಂಧಿಸಲಾಯಿತು. ಅವರನ್ನು ಚುನಾವಣೆ ಹೊತ್ತಲ್ಲಿ ಬಂಧಿಸುವ ಅಗತ್ಯ ಏನಿತ್ತು? ಬಿಜೆಪಿ ಸೋಲಿಸುವ ತನಕ ಶಾಂತಿ ನೆಲೆಸುವುದಿಲ್ಲ. 140 ಕೋಟಿ ಜನರ ರಕ್ಷಿಸಲು ಬಿಜೆಪಿ ಸೋಲಿಸಬೇಕು ಎಂದು ಅವರು ಕರೆಕೊಟ್ಟಿದ್ದಾರೆ.