ಪ್ರಲ್ಹಾದ ಜೋಶಿಯನ್ನು ಬದಲಾಯಿಸಬೇಕೆಂಬ ನಿಲುವಿನಿಂದ ಹಿಂದೆ ಸರಿಯಲ್ಲ; ಸೋಲಿಸುವುದು ಅನಿವಾರ್ಯವಾಗಿದೆ: ದಿಂಗಾಲೇಶ್ವರ ಸ್ವಾಮೀಜಿ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರನ್ನು ಬದಲಾಯಿಸಬೇಕೆಂಬ ನಿಲುವಿನಿಂದ ಹಿಂದೆ ಸರಿಯಲ್ಲ. ಜೋಶಿ ಸೋಲಿಸುವುದು ಅನಿವಾರ್ಯವಾಗಿದೆ ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 31ರೊಳಗೆ ಅಭ್ಯರ್ಥಿ ಬದಲಾಯಿಸಬೇಕೆಂದು ಗಡುವು ನೀಡಲಾಗಿತ್ತು. ಈ ಬಗ್ಗೆ ಕ್ರಮ ವಹಿಸದ ಕಾರಣ ಏಪ್ರಿಲ್ 2ರಂದು ಬೆಳಿಗ್ಗೆ 10.30ಕ್ಕೆ ಧಾರವಾಡದಲ್ಲಿ ಲೋಕಸಭಾ ಕ್ಷೇತ್ರದ ಭಕ್ತರ ಸಭೆ ನಡೆಸಿ, ಮುಂದಿನ ನಿರ್ಧಾರ ಪ್ರಕಟಿಸಲಾಗುವುದು ಎಂದರು.
ನೊಂದವರಿಗೆ ಸಾಂತ್ವನ ನೀಡುವುದು ನಮ್ಮ ಉದ್ದೇಶ. ಚುನಾವಣೆಗೆ ಸ್ಪರ್ಧಿಸುವ, ಬೇರೊಬ್ಬರನ್ನು ಸ್ಪರ್ಧಿಸುವಂತೆ ಮಾಡುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಹಲವು ನಾಯಕರು ದೂರವಾಣಿ ಮೂಲಕ ಹಾಗೂ ಪ್ರತ್ಯಕ್ಷವಾಗಿ ನನ್ನ ಮನವೊಲಿಸಲು ಯತ್ನಿಸಿದರು. ಮಾನಹಾನಿ, ಪ್ರಾಣಹಾನಿಯ ಬೆದರಿಕೆಗಳೂ ಬಂದವು. ಒಂದು ಬಾರಿ ತೆಗೆದುಕೊಂಡ ತೀರ್ಮಾನವನ್ನು ಎಷ್ಟೇ ದೊಡ್ಡ ವ್ಯಕ್ತಿ, ಎಷ್ಟೇ ಒತ್ತಡ ಹೇರಿದರೂ ಬದಲಾಯಿಸಲ್ಲ ಎಂದು ತಿಳಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ದಮನಕಾರಿ ನೀತಿಯಿಂದ ಕ್ಷೇತ್ರದ ಹಲವಾರು ಸಮುದಾಯಗಳು ನೊಂದಿವೆ. ಭಾವೈಕ್ಯತಾ ಪೀಠದ ಸ್ವಾಮೀಜಿ ನಾನಾಗಿರುವುದರಿಂದ ಅವರಿಗೆ ನ್ಯಾಯ ಕೊಡಿಸಬೇಕಿದೆ. ಮಾನ, ಪ್ರಾಣ ಹೋದರೂ ಮುಂದಿಟ್ಟ ಹೆಜ್ಜೆ ಹಿಂದೆ ಇಡಲ್ಲ. ಆಮಿಷ, ಬೆದರಿಕೆಗೆ ಬಗ್ಗುವ ಮನಸ್ಥಿತಿಯ, ಪರಿಸ್ಥಿತಿಯ ಸ್ವಾಮಿ ನಾನಲ್ಲ ಎಂದರು.
ಬಿಜೆಪಿಗೆ ಜೋಶಿ ಅನಿವಾರ್ಯವಾದರೆ, ನಮಗೆ ಜನರ ಹಿತ, ನೆಮ್ಮದಿ ಅನಿವಾರ್ಯ. ಇದಕ್ಕಾಗಿ ಹೋರಾಟವೂ ಅನಿವಾರ್ಯವಾಗಿದೆ. ನನ್ನ ಜೀವ ಇರುವವರೆಗೆ ಈ ಹೋರಾಟ ಮುಂದುವರಿಯಲಿದೆ ಎಂದು ನುಡಿದರು.
ನಮ್ಮೊಂದಿಗಿದ್ದ ಸ್ವಾಮೀಜಿಗಳಿಗೆ ತಮ್ಮ ಹೇಳಿಕೆ ಬದಲಿಸುವಂತೆ ಒತ್ತಡ ಹೇರಿದ್ದಾರೆ. ತಾವೇ ಪತ್ರ ಸಿದ್ಧಮಾಡಿ, ಎಲ್ಲ ಮಠಕ್ಕೆ ಕಳಿಸಿದ್ದಾರೆ. ಪ್ರಜಾಸತ್ತೆ ಸತ್ತುಹೋಗಿದ್ದು, ರಾಜಸತ್ತೆ ಜೀವಂತವಾಗಿದೆ ಎಂಬ ಹೇಳಿಕೆ ಮತ್ತೆ ಸಾಬೀತಾಗಿದೆ. ಜೋಶಿ ಅವರಿಗೆ ಬುದ್ಧಿ ಕಲಿಸಲು ನಾನೊಬ್ಬ ಸಾಕು. ಸನ್ಯಾಸಿ ಮನಸ್ಸು ಮಾಡಿದರೆ ಏನೆಲ್ಲ ಆಗಬಹುದು ಎಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ನಿದರ್ಶನಗಳಿವೆ. ದುರ್ಬಲ ಸ್ವಾಮೀಜಿ ನಾನಲ್ಲ. ಯೋಗ ಬಲದ ಮುಂದೆ ಎಲ್ಲವೂ ನಾಶವಾಗುತ್ತವೆ ಎಂದರು.
ರಾಜ್ಯದ ಎಲ್ಲ ಮಠಾಧೀಶರು ಮಾನಸಿಕವಾಗಿ ನಮ್ಮೊಂದಿಗಿದ್ದಾರೆ. ಯಾರದೋ ಒತ್ತಡಕ್ಕೆ ಮಣಿದು ಸುಮ್ಮನಿರಬಹುದು. ಸ್ವಾಮೀಜಿಗಳು ನಾಡಿನ ಹಿತಕ್ಕಾಗಿ ಯೋಚಿಸಬೇಕು. ವ್ಯಕ್ತಿ ಪ್ರಜ್ಞೆಗಿಂತ ಸಮಷ್ಠಿ ಪ್ರಜ್ಞೆ ಇರಬೇಕು. ಇನ್ಮುಂದೆ ಈ ವಿಚಾರದಲ್ಲಿ ಮಠಾಧಿಪತಿಗಳ ಸಭೆ ಕರೆಯಲ್ಲ. ಸ್ವ ಇಚ್ಛೆಯಿಂದ ಬರಬಹುದು. ಲಿಂಗಾಯತ ಸಮಾಜ ಮಾತ್ರವಲ್ಲದೆ ನೊಂದ ಎಲ್ಲ ಸಮಾಜದವರು ಶೀಘ್ರದಲ್ಲೇ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.