ಪ್ರಜ್ವಲ್ ದೇಶ ತೊರೆಯದಂತೆ ತಡೆಯುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕೆ ವಿಫಲವಾಯಿತು? ಸಚಿವ ಸಂತೋಷ್ ಲಾಡ್ ಪ್ರಶ್ನೆ
ಶಿವಮೊಗ್ಗ: ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋಗಳು ಬಹಿರಂಗವಾದ ಬೆನ್ನಲ್ಲೇ ವಿದೇಶಕ್ಕೆ ಹಾರಿರುವ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ದೇಶ ತೊರೆಯದಂತೆ ತಡೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕೆ ವಿಫಲವಾಯಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಪರ ಪ್ರಚಾರಕ್ಕಾಗಿ ಇಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಸಂತೋಷ್ ಲಾಡ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಯಾವುದೇ ವಿಳಂಬ ಮಾಡಿಲ್ಲ ಎಂದರು.
ಯಾವುದೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಅವರ ವಿರುದ್ಧ ದೂರು ದಾಖಲಿಸಬೇಕು. ದೂರು ದಾಖಲಾದ ಕ್ಷಣವೇ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರ ಪ್ರಜ್ವಲ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಬಹುದಿತ್ತು. ಏರ್‌ಪೋರ್ಟ್‌ಗಳನ್ನು ಮ್ಯಾನೇಜ್ ಮಡ್ತಿರೋದ್ಯಾರು? ಪ್ರಜ್ವಲ್ ದೇಶದಿಂದ ಹಾರುವುದನ್ನು ಕೇಂದ್ರ ಏಕೆ ತಡೆಯಲಿಲ್ಲ? ಆರೋಪಿಯನ್ನು ಬಂಧಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ನಮ್ಮ ಸರ್ಕಾರ ಎಸ್‌ಐಟಿ ರಚನೆಯಾಗುತ್ತಿದ್ದಂತೆ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.
ಮೋದಿಯವರ ಬಳಿ ಸುಳ್ಳುಗಳ ಸರಮಾಲೆಯೇ ಇದೆ. ದೇಶ ಕಂಡ ಎಲ್ಲ ಪ್ರಧಾನಿಗಳಲ್ಲಿ ಪ್ರತಿ ಬಾರಿಯೂ ಸುಳ್ಳು ಹೇಳುವ ಮೊದಲ ಪ್ರಧಾನಿ ಎಂದರೆ ಅದು ಮೋದಿ. ಮೋದಿಯವರ ಸುಳ್ಳುಗಳು ನಮ್ಮ ಗೆಲುವಿಗೆ ಸಹಾಯ ಮಾಡುತ್ತವೆ ಎಂದು ಸಂತೋಷ್ ಲಾಡ್ ಹೇಳಿದರು.
ಮೋದಿ ಅವರು ಹಿಂದೂಗಳು ಬಹಳ ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಮೋದಿಯವರೇ, ಕಳೆದ 10 ವರ್ಷ ಆಡಳಿತ ನಡೆಸಿದ್ದೀರಿ. ನಿಮ್ಮದೇ ಅವಧಿಯಲ್ಲಿ ಹಿಂದೂಗಳ ಅಪಾಯದಲ್ಲಿದ್ದಾರೆಯೇ ಎಂದು ಲಾಡ್ ಪ್ರಶ್ನಿಸಿದರು.
ನಮ್ಮ ಅವಧಿಯಲ್ಲಿ ಹಿಂದೂಗಳು ಅರಾಮವಾಗಿದ್ದರು. ಈಗ ಮೋದಿ ಅವರು ತಮ್ಮ ಅಭಿವೃದ್ಧಿ ಬಗ್ಗೆ ಮಾತನಾಡದೇ, ಪಾಕಿಸ್ತಾನ, ಅಫ್ಘಾನಿಸ್ತಾನ, ಮುಸಲ್ಮಾನ ಎಂದು ಭಾಷಣ ಮಾಡುತ್ತಿದ್ದಾರೆ. ಮೋದಿ ಅವರು ನಮ್ಮ ಗ್ಯಾರಂಟಿಯನ್ನು ಕಾಫಿ ಮಾಡಿದ್ದಾರೆ ಎಂದರು. ದೇಶದ ಶೇ. 40 ರಷ್ಟು ಸಂಪತ್ತು ಕೇವಲ ಶೇ.1 ರಷ್ಟು ಜನರ ಬಳಿ ಇದೆ. ಇದು ಮೋದಿ ಅವರ ಸಾಧನೆ ಎಂದು ವಾಗ್ದಾಳಿ ನಡೆಸಿದರು.