ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟ: ಶೇಕಡಾ ಶೇ.73.40 ವಿದ್ಯಾರ್ಥಿಗಳು ತೇರ್ಗಡೆ, ಉಡುಪಿ ಜಿಲ್ಲೆ ಪ್ರಥಮ-ಕೊನೆಯ ಸ್ಥಾನದಲ್ಲಿ ಯಾದಗಿರಿ
ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2024) ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ಮತ್ತು kseab.karnataka.gov.in ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು.
ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ಪಾಸ್ ಆಗಿದ್ದಾರೆ.
94% ಫಲಿತಾಂಶದೊಂದಿಗೆ ಉಡುಪಿ ಮೊದಲ ಸ್ಥಾನದಲ್ಲಿದೆ. 92.12% ನೊಂದಿಗೆ ದಕ್ಷಿಣ ಕನ್ನಡ ಹಾಗೂ 88.67% ನೊಂದಿಗೆ ಶಿವಮೊಗ್ಗ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಯಾದಗಿರಿ ಯಾದಗಿರಿ – 50.59% ನೊಂದಿಗೆ ಕೊನೆ ಸ್ಥಾನದಲ್ಲಿದೆ.
ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಮಾರ್ಚ್ 25 ರಿಂದ ಏಪ್ರಿಲ್ 6ರವರೆಗೆ ಪರೀಕ್ಷೆ ನಡೆದಿತ್ತು, ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯನ್ನು 8.69 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.
8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು
ಕರ್ನಾಟಕದಲ್ಲಿ ಈ ಸಲ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 4.41 ಲಕ್ಷ ಬಾಲಕರು, 4.28 ಬಾಲಕಿಯರು. ಅಲ್ಲದೆ, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಕರ್ನಾಟಕದ 2,750 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು.
ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಲಾದ ಆನ್‌ಲೈನ್ ಮಾರ್ಕ್ ಶೀಟ್ ತಾತ್ಕಾಲಿಕವಾಗಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಶಾಲೆಗಳ ಅಧಿಕೃತ ಸೂಚನೆಯ ಪ್ರಕಾರ ಫಲಿತಾಂಶಗಳನ್ನು ಪ್ರಕಟಿಸಿದ ಕೆಲವು ದಿನಗಳ ನಂತರ ತಮ್ಮ ಶಾಲೆಗಳಿಂದ SSLC ಮಾರ್ಕ್‌ಶೀಟ್ ಪಡೆಯಬೇಕು.
ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3ಕ್ಕೆ ಅವಕಾಶ: ವಿದ್ಯಾರ್ಥಿಗಳು ಪಾಸಾಗಲಿ ಅಥವಾ ಫೇಲಾಗಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಪಾಸಾದರೂ ಅಂಕ ಹೆಚ್ಚಿಸಿಕೊಳ್ಳಲು ಪರೀಕ್ಷೆ-2, ಪರೀಕ್ಷೆ-3 ಬರೆಯಬಹುದು.