ಮಳೆಯೊಂದಿಗೆ ಆಕಾಶದಿಂದ ಬಿದ್ದ ಮೀನುಗಳು ! ಮೀನುಗಳನ್ನು ಕಂಡು ಅಚ್ಚರಿಗೊಂಡ ಜನ...!
ಜೋರು ಮಳೆ ಸುರಿಯುತ್ತಿರುವಾಗ ನೀರಿನ ಹನಿಯೊಂದಿಗೆ ಮೀನುಗಳೂ ಬಿದ್ದರೆ ಹೇಗಿರುತ್ತದೆ...? ಡೌಡೇ ಇಲ್ಲ ಖಂಡಿತಾ ಎಲ್ಲರಿಗೂ ಅಚ್ಚರಿಯಾಗುತ್ತದೆ, ಕುತೂಹಲದಿಂದ ಮೀನುಗಳನ್ನು ಕೈಯಲ್ಲಿ ಹಿಡಿಯುವ ಮನಸ್ಸೂ ಆಗುತ್ತದೆ. ಸದ್ಯ ಇಂತಹದ್ದೇ ಅಚ್ಚರಿ, ಕುತೂಹಲ ಇರಾನಿನ ಜನರಿಗೂ ಮೂಡಿತ್ತು. ಯಾಕೆಂದರೆ ಇಲ್ಲಿ ಮಳೆಯೊಂದಿಗೆ ಮೀನುಗಳೂ ಬಿದ್ದಿದ್ದವು...!
ಮೀನಿನ ಮಳೆ ಬಗ್ಗೆ ಕೇಳಿದ್ದೀರಾ...? ಬಹುಶಃ ಸಾಕಷ್ಟು ಮಂದಿ ಇಂತಹ ಮಳೆಯ ಬಗ್ಗೆ ಕೇಳಿರಬಹುದು. ಯಾಕೆಂದರೆ ಆಗಾಗ ಇಂತಹ ದೃಶ್ಯಗಳು ನಮಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ನಮ್ಮ ಹುಬ್ಬೇರಿಸುವಂತೆಯೂ ಮಾಡುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇರಾನ್‌ನ 'ಯಸುಜ್' ನಗರದಲ್ಲಿ ನಡೆದ ಘಟನೆ ಇದು ಎಂದು ಹೇಳಲಾಗುತ್ತಿದೆ. 'ಯಸುಜ್' ಇರಾನ್‌ನ ಸಣ್ಣ ಹಾಗೂ ಕೈಗಾರಿಕಾ ನಗರ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಳೆಯೊಂದಿಗೆ ಮೀನುಗಳು ಬೀಳುತ್ತಿರುವುದನ್ನು ಕಾಣಬಹುದು. ಹೀಗೆ ಮೇಲಿಂದ ಬಿದ್ದ ಮೀನುಗಳು ರಸ್ತೆಯ ತುಂಬಾ ಬಿದ್ದಿರುವುದು ಕೂಡಾ ಕಾಣಿಸುತ್ತದೆ. ಹೀಗೆ ಕಣ್ಣೆದುರು ಮೀನು ಬಿದ್ದಾಗ ಕುತೂಹಲದಿಂದ ಎತ್ತಿಕೊಂಡ ಜನರು ಅದರ ದೃಶ್ಯವನ್ನೂ ಸೆರೆ ಹಿಡಿದಿದ್ದಾರೆ. ಸಹಜವಾಗಿಯೇ ಈ ದೃಶ್ಯ ಅಚ್ಚರಿ ಮೂಡಿಸುವಂತಿದೆ.
ಇನ್ನು ಈ ಬಗ್ಗೆ ನೆಟ್ಟಿಗರ ಬಗೆಬಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಲವರು ಇದು ಪ್ರಕೃತಿಯ ಪವಾಡ ಎಂದು ಕರೆದರೆ, ಇನ್ನೊಂದಷ್ಟು ಮಂದಿ ಇದು ಹವಾಮಾನ ಬದಲಾವಣೆಯ ಪರಿಣಾಮ ಎಂದು ಹೇಳುತ್ತಾರೆ. ಕೆಲವರು ಇದು ನಕಲಿ ವಿಡಿಯೋ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಬೇರೆ ಬೇರೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ.
ಇದು ಸಾಧ್ಯವೇ...?
ಈ ದೃಶ್ಯವನ್ನು ನೋಡುವಾಗ ಅಚ್ಚರಿಯಾಗುತ್ತದೆ ನಿಜ. ಇದನ್ನು ನೋಡುವಾಗ ಇದು ಸಾಧ್ಯವೇ ಎಂದೂ ಅನಿಸುತ್ತದೆ. ಆದರೆ, ಇಂತಹ ವಿದ್ಯಮಾನ ನಡೆಯುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಸಾಮಾನ್ಯವಾಗಿ ಇದನ್ನು ಆನಿಮಲ್ ರೈನ್ ಅರ್ಥಾತ್ ಪ್ರಾಣಿ ಮಳೆ ಎಂದು ಕರೆಯಲಾಗುತ್ತದೆ. ಇದರ ಹಿಂದಿನ ಕಾರಣಗಳ ಸುಂಟರಗಾಳಿ. ಪ್ರಬಲವಾಗಿ ಬೀಸುವ ಸುಂಟರಗಾಳಿ ನದಿ, ಕೊಳ ಅಥವಾ ಸಮುದ್ರದ ನೀರಿನ ಮೇಲ್ಮೈಯಲ್ಲಿ ತಿರುಗಿದಾಗ ಅದು ಅಲ್ಲಿನ ಜಲಚರ ಪ್ರಾಣಿಗಳನ್ನೂ ಎಳೆದುಕೊಳ್ಳುತ್ತದೆ. ಈ ಶಕ್ತಿಶಾಲಿ ಸುಂಟರಗಾಳಿಯ ಸುಳಿಯಲ್ಲಿ ಮೀನು, ಕಪ್ಪೆಗಳು, ಆಮೆಗಳು ಮತ್ತು ಏಡಿಗಳಂತಹ ಜೀವಿಗಳು ಸಿಲುಕಿಕೊಳ್ಳುತ್ತವೆ. ಹೀಗೆ ಪ್ರಬಲವಾಗಿ ಬೀಸುವ ಈ ಮಾರುತದೊಂದಿಗೆ ಹಾರುವ ಬರುವ ಈ ಮೀನುಗಳು ಗಾಳಿಯ ತೀವ್ರತೆ ಕಡಿಮೆಯಾದಾಗ ಕೆಳಗೆ ಬೀಳಲು ಪ್ರಾರಂಭಿಸುತ್ತವೆ ಎಂದು ಹೇಳಲಾಗುತ್ತದೆ.