ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಬೆಳಗಾವಿ! ಹೆರಿಗೆ ನಂತರ ಪ್ರಜ್ಞೆ ತಪ್ಪಿದ ಹಿಂದೂ ಬಾಣಂತಿ-ನವಜಾತ ಶಿಶುವನ್ನು 40 ದಿನಗಳ ಕಾಲ ಆರೈಕೆ ಮಾಡಿ ಮಾನವೀಯತೆ ಮರೆದ ಮುಸ್ಲಿಂ ಕುಟುಂಬ! ಎಲ್ಲೆಡೆಯಿಂದ ಭಾರೀ ಪ್ರಶಂಸೆ
ಬೆಳಗಾವಿ: ಇಂದು ದೇಶವೇ ಧರ್ಮ ಧರ್ಮಗಳ ಮಧ್ಯೆಗಿನ ದ್ವೇಷದಿಂದ ಕಂಗೆಟ್ಟಿರುವಂಥ ಸನ್ನಿವೇಶದಲ್ಲಿ ಜಾತಿ-ಧರ್ಮಗಳ ಹೆಸರಿನಲ್ಲಿ ಮನುಷ್ಯರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವವರಿಗೆ ಇಲ್ಲೊಂದು ಕಪಾಳಕ್ಕೆ ಹೊಡೆಯುವಂತಹ ಸುದ್ದಿಯಿದೆ. ಅಂದ ಹಾಗೆ ಇದು ಜಾತಿ ಧರ್ಮಕ್ಕಿಂತ ಮನುಷ್ಯತ್ವವೇ ಮಿಗಿಲು ಎಂದು ಸಾರುವಂತಹ ಘಟನೆ.
ಧರ್ಮಗಳ ಕವಚದ ಬೇಲಿಯನ್ನು ಮೀರಿ ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಹೆರಿಗೆ ನಂತರ ಪ್ರಜ್ಞೆ ತಪ್ಪಿದ ಹಿಂದೂ ಬಾಣಂತಿ ಹಾಗು ಆಕೆಯ ನವಜಾತ ಶಿಶುವನ್ನು ಮುಸ್ಲಿಂ ಕುಟುಂಬವೊಂದು ಆರೈಕೆ ಮಾಡಿದ ಘಟನೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಇದೀಗ ಈ ಘಟನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾದ ಹಿನ್ನೆಲೆಯಲ್ಲಿ ಬಾಣಂತಿ ಶಾಂತವ್ವ ನಿಡಸೋಸಿ ಅವರು ತೀವ್ರ ರಕ್ತಸ್ರಾವದಿಂದ ಪ್ರಜ್ಞೆತಪ್ಪಿದ್ದರು. ಆಗ ಪಕ್ಕದ ಬೆಡ್ ನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಕೊಣ್ಣೂರ ಗ್ರಾಮದ ಮುಸ್ಲಿಂ ಧರ್ಮದ ಶಮಾ ದೇಸಾಯಿ ಎನ್ನುವವರು ಹೆರಿಗೆಯಾದ ಬಾಣಂತಿ ಮಹಿಳೆಗೆ ಯಾರೂ ಸಂಬಂಧಿಕರು ಇರದ ಹಿನ್ನೆಲೆಯಲ್ಲಿ ನವಜಾತ ಶಿಶು ಹಾಗೂ ತಾಯಿಯ ಆರೈಕೆ ಮಾಡಿ ಮಾನವೀಯತೆ ಮರೆದಿದ್ದಾರೆ.
ಯಾರು ಹೆತ್ತ ಮಗಳೋ ಏನೋ, ಇದೀಗ ಆ ತುಂಬು ಗರ್ಭಿಣಿಗೆ ಹೆರಿಗೆಯಾಗಿ ಬಾಣಂತಿಯಾಗಿ ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದಾಳೆ. ಜಾತಿ ಧರ್ಮದ ಹೆಸರೇಳಿ ಮನುಷ್ಯರ ಮಧ್ಯೆ ವಿಷ ಬೀಜ ಬಿತ್ತುವ ಹೇಡಿಗಳ ಮಾತು ಕೇಳಿದ್ದಿದ್ದರೆ ಹಿಂದೂ ಧರ್ಮಕ್ಕೆ ಸೇರಿದ ಆ ಬಾಣಂತಿ ಮತ್ತು ನವಜಾತ ಶಿಶುವಿನ ಆ ಕ್ಷಣದ ಸನ್ನಿವೇಶವನ್ನು ಊಹಿಸಲೂ ಅಸಾಧ್ಯ. ಆದರೆ ಧರ್ಮಕ್ಕಿಂತ ಮನುಷ್ಯತ್ವ ಮೇಲು ಎಂಬುದನ್ನು ಶಮಾ ದೇಸಾಯಿ ತನ್ನ ಕರ್ತವ್ಯ ಮೂಲಕ ಸಾರಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಳೆದ ಏಪ್ರಿಲ್ 20ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ದಂಡಾಪೂರ ಗ್ರಾಮದ ಶಾಂತವ್ವ ನಿಡಸೋಸಿ ಎಂಬುವವರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಶಾಂತವ್ವ ನಿಡಸೋಸಿ ಅವರಿಗೆ ಪ್ರಜ್ಜೆ ತಪ್ಪಿತ್ತು. ಆಗ ಅವರ ಜೊತೆ ಅವರ ಕುಟುಂಬಸ್ಥರು ಯಾರೂ ಇರದ ಹಿನ್ನೆಲೆ ಪಕ್ಕದ ಬೆಡ್‌ನಲ್ಲಿದ್ದ ಮುಸ್ಲಿಂ ಕುಟುಂಬದ ಶಮಾ ದೇಸಾಯಿ ಅವರು ನೆರವಿಗೆ ಧಾವಿಸಿದ್ದಾರೆ.
ಅಷ್ಟೇ ಅಲ್ಲ, ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಬಾಣಂತಿ ಮಹಿಳೆ ಮತ್ತು ಮಗುವಿನ ಆರೈಕೆ ಮಾಡಿದ ನಂತರ ಮಗುವನ್ನ ತಮ್ಮ ಮನೆಗೆ ಕರೆದೊಯ್ದು 40 ದಿನಗಳ ಕಾಲ ಆರೈಕೆ ಮಾಡಿದ್ದಾರೆ. ಬಳಿಕ ಹೆರಿಗೆಯಾದ ಮಹಿಳೆ ಪೂರ್ಣ ಪ್ರಮಾಣದಲ್ಲಿ ಚೇತರಿಕೆಯಾದ ನಂತರವಷ್ಟೇ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ಹಿಂದೂ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ಈ ವೇಳೆ ಮುಸ್ಲಿಂ ಕುಟುಂಬವನ್ನು ಬೆಳಗಾವಿ ಮಾರ್ಕೆಟ್ ಠಾಣಾ ಪೊಲೀಸರು ಗೌರವಿಸಿ ಸನ್ಮಾನಿಸಿದ್ದಾರೆ.
ಈ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಬೆಳಗಾವಿಯ ಈ ಎರಡು ಕುಟುಂಬವನ್ನು ಸಜ್ಜನರೆಲ್ಲರೂ ಶ್ಲಾಘಿಸಿದ್ದು, ಮಗು ಬಾಣಂತಿಯ ಆರೈಕೆ ಮಾಡಿದ ಮುಸ್ಲಿಂ ಕುಟುಂಬಕ್ಕೆ ಪೋಲಿಸ್ ಅಧಿಕಾರಿಗಳು ಸನ್ಮಾನ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.