ಮುಸ್ಲಿಮರ ವೇಷ ಹಾಕಿ ಹಿಂದೂಗಳ ಟೀಕೆ; ಗಲಭೆ ಸೃಷ್ಟಿಸಲು ಯತ್ನಿಸಿದ ಧೀರೇಂದ್ರ ರಾಘವ್ ಬಂಧನ
ಲಕ್ನೋ: ಮುಸ್ಲಿಮ್ ಸಮುದಾಯದ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಮುಸ್ಲಿಮರಂತೆ ಟೋಪಿ ಹಾಗು ವೇಷ ಹಾಕಿ ಅಯೋಧ್ಯೆಯ ಹಿಂದೂಗಳನ್ನು ಟೀಕಿಸಿದ ಉತ್ತರ ಪ್ರದೇಶದ ಧೀರೇಂದ್ರ ರಾಘವ್ ಎಂಬಾತನನ್ನು ಬಂಧಿಸಲಾಗಿದೆ.
ಧೀರೇಂದ್ರ ರಾಘವ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದು, ಜನ ರೊಚ್ಚಿಗೆದ್ದಿದ್ದರು. ತಾನು ಮುಸ್ಲಿಂ ಎಂದು ಹೇಳಿಕೊಂಡು ಧೀರೇಂದ್ರ ರಾಘವ್ ಹಿಂದೂ ಸಮುದಾಯದ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದು, ಇದು ಎರಡು ಸಮುದಾಯದ ಮಧ್ಯೆ ಕಿಚ್ಚು ಹಚ್ಚುವಂತೆ ಮಾಡಿತ್ತು. ಕೆಲವರಂತೂ ಇದರ ಸತ್ಯಾಸತ್ಯತೆ ಅರಿಯದೆ ಮುಸ್ಲಿಂ ಸಮುದ್ಯದ ವಿರುದ್ಧ ಮತ್ತಷ್ಟು ದ್ವೇಷದ ಮಾತುಗಳನ್ನಾಡಿದ್ದರು.
ಸ್ಕಲ್‍ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬ "ದೋಗ್ಲೆ" (ಎರಡು ಮುಖದವರು) ಹಿಂದೂಗಳನ್ನು ಉದ್ದೇಶಿಸಿ ಮಾತನಾಡುವ ವಿಡಿಯೊ ವೈರಲ್ ಆಗಿತ್ತು. ಮುಸ್ಲಿಂ ವ್ಯಕ್ತಿ ಎಂದು ಹೇಳಿಕೊಂಡ ಆತ, ಅಯೋಧ್ಯೆಯ ಹಿಂದೂಗಳನ್ನು ಎರಡು ಮುಖದವರು ಎಂದು ಕರೆದು, ರಾಹುಲ್‍ಗಾಂಧಿ ಅಧಿಕಾರಕ್ಕೆ ಬಂದಿದ್ದರೆ, ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದರು ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
"ಒಬ್ಬ ನಾಯಕ ನಮಗೆ ಮಸೀದಿ ನಿರ್ಮಿಸಿದರೆ, ನಾವು ನಮ್ಮ ಜೀವನವಿಡೀ ಆತನಿಗೆ ಮತ ಹಾಕುತ್ತೇವೆ. ಆದರೆ ನಿಮಗೆ ಎಲ್ಲವನ್ನೂ ಮಾಡಿದ್ದರೂ ನೀವು ಮೋದಿಗೆ ಮತ ಹಾಕುವುದಿಲ್ಲ" ಎಂದು ಆತ ಹೇಳಿದ್ದಾನೆ.
ಚುನಾವಣೆಗೆ ಕೆಲ ತಿಂಗಳ ಹಿಂದೆ ರಾಮಮಂದಿರ ಉದ್ಘಾಟನೆಯಾಗಿದ್ದರೂ, ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಇದನ್ನು ದೃಢೀಕರಿಸುವಂತೆ ಕೋರಿ ಹಲವು ಮಂದಿ ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಈ ವಿಡಿಯೊದಲ್ಲಿರುವ ವ್ಯಕ್ತಿ ವಿಷಯಗಳ ಸೃಷ್ಟಿಕರ್ತ ಧೀರೇಂದ್ರ ರಾಘವ್ ಎಂದು ತಿಳಿದು ಬಂದಿದೆ.
ಮುಸ್ಲಿಮರ ವೇಷ ಹಾಕಿ ಹಿಂದೂಗಳನ್ನು ಟೀಕಿಸಿ ಗಲಭೆ ಸೃಷ್ಟಿಸಲು ಯತ್ನಿಸಿದ ಧೀರೇಂದ್ರ ರಾಘವ್ ನನ್ನು ಬಂಧಿಸಲಾಗಿದೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೊ ತಯಾರಿಸಿದ್ದಾಗಿ ಆಪಾದಿಸಲಾಗಿತ್ತು.
ಜೂನ್ 4ರಂದು ‘dhirendra_raghav_79’ಎಂಬ ಹೆಸರಿನ ವೆರಿಫೈಡ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವೈರಲ್ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವಿಡಿಯೋದ ಜೊತೆಗೆ “ಮಂದಿರದ ಬದಲಿಗೆ ಮಸೀದಿ ನಿರ್ಮಿಸಲಾಗುವುದು” ಎಂದು ಬರೆಯಲಾಗಿದೆ. ಅಲ್ಲದೆ #dhokha #hindutemple #bjp ಎಂಬ ಹ್ಯಾಷ್ ಟ್ಯಾಗ್‌ಗಳನ್ನು ಕೊಡಲಾಗಿದೆ.