ಚುನಾವಣೆಯಲ್ಲಿ ತಮ್ಮ ಭವಿಷ್ಯ ಸುಳ್ಳಾದ ಹಿನ್ನಲೆ; ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ ಎಂದು ಘೋಷಣೆ ಮಾಡಿದ ಪ್ರಶಾಂತ್ ಕಿಶೋರ್
ನವದೆಹಲಿ: ಚುನಾವಣಾ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದ ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ತಮ್ಮ ಭವಿಷ್ಯ ಸುಳ್ಳಾದ ಹಿನ್ನಲೆಯಲ್ಲಿ ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ ಎಂದು ಘೋಷಣೆ ಮಾಡಿದ್ದಾರೆ.
ಹೌದು.. ಚುನಾವಣಾ ಫಲಿತಾಂಶದ ಬಳಿಕ ಮೊದಲ ಮಾಧ್ಯಮ ಸಂದರ್ಶನ ನೀಡಿರುವ ಪ್ರಶಾಂತ್ ಕಿಶೋರ್ ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ ಎಂದು ಘೋಷಣೆ ಮಾಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ''ನಾನು ಮತ್ತು ನನ್ನಂತಹ ಸಮೀಕ್ಷೆಗಾರರು ಈ ಬಾರಿ ಚುನಾವಣೆಯನ್ನು ತಪ್ಪಾಗಿ ಗ್ರಹಿಸಿದ್ದೆವು. ಈ ಬಗ್ಗೆ ನಮ್ಮಿಂದಾಗಿರುವ ತಪ್ಪು ಲೆಕ್ಕಾಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು, ಪ್ರಶಾಂತ್ ಕಿಶೋರ್ ಬಿಜೆಪಿ ತನ್ನ 2019 ರ ಚುನಾವಣಾ ಸಾಧನೆಯನ್ನು ಪುನರಾವರ್ತಿಸುತ್ತದೆ ಮತ್ತು ಸುಮಾರು 300 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿತ್ತು.
ಇದೇ ವೇಳೆ ದೇಶದ ಮುಂದಿನ ಚುನಾವಣೆಗಳಲ್ಲಿ ನೀವು ಅಂಕಿಅಂಶಗಳನ್ನು ಭವಿಷ್ಯ ನುಡಿಯುವುದನ್ನು ಮುಂದುವರಿಸುತ್ತೀರಾ ಎಂದು ಕೇಳಿದಾಗ, ಪ್ರಶಾಂತ್ ಕಿಶೋರ್, “ಇಲ್ಲ, ನಾನು ಇನ್ನು ಮುಂದೆ ಯಾವ ಚುನಾವಣೆಯಲ್ಲೂ ಸ್ಥಾನಗಳ ಲೆಕ್ಕಾಚಾರವಾಗಲೀ ಭವಿಷ್ಯವನ್ನಾಗಲಿ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು ನನ್ನ ಮೌಲ್ಯಮಾಪನವನ್ನು ನಿಮ್ಮ ಮುಂದೆ ಇಟ್ಟಿದ್ದೇನೆ ಮತ್ತು ನಾನು ಮಾಡಿದ ಮೌಲ್ಯಮಾಪನವು ಶೇಕಡಾ 20 ರಷ್ಟು ದೊಡ್ಡ ಪ್ರಮಾಣದಲ್ಲಿ ತಪ್ಪಾಗಿದೆ ಎಂದು ನಾನು ಒಪ್ಪಿಕೊಳ್ಳಬೇಕು. ನಾವು ಬಿಜೆಪಿ 300 ರ ಸಮೀಪಕ್ಕೆ ಬರಲಿದೆ ಎಂದು ಹೇಳಿದ್ದೆವು. ಆದರೆ ಅವರಿಗೆ 240 ಸ್ಥಾನಗಳು ಮಾತ್ರ ಸಿಕ್ಕಿತು. ಜನರಿಗೆ ಬಿಜೆಪಿ ಮೇಲೆ ಸ್ವಲ್ಪ ಕೋಪವಿದೆ. ಆದರೆ ನರೇಂದ್ರ ಮೋದಿ ವಿರುದ್ಧ ಯಾವುದೇ ವ್ಯಾಪಕ ಅಸಮಾಧಾನವಿಲ್ಲ ಎಂದು ನಾನು ಮೊದಲೇ ಹೇಳಿದ್ದೆ ಎಂದು ಪ್ರಶಾತ್ ಕಿಶೋರ್ ಹೇಳಿದ್ದಾರೆ.
ದೇಶದಲ್ಲಿ ಪ್ರತಿಪಕ್ಷಗಳ ಪರ ಜನರ ಒಲವು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ನಾನು ಹೇಳಿದ್ದೆ. ಅದರಂತೆ ಪೂರ್ವ ಮತ್ತು ದಕ್ಷಿಣದಲ್ಲಿ ಅವುಗಳು ಅಷ್ಟೇ ಹಿಂದಿನ ಚುನಾವಣೆಯಷ್ಟೇ ಸ್ಥಾನಗಳನ್ನು ಪಡೆದುಕೊಂಡು ಯಥಾಸ್ಥಿತಿ ಕಾಪಾಡಿಕೊಂಡಿವೆ. ನಿಸ್ಸಂಶಯವಾಗಿ, ನಾವು ತಪ್ಪು ಎಂದು ಸಾಬೀತಾಗಿದೆ. ಆದರೆ ನಂಬರ್ ಅನ್ನು ಹೊರತುಪಡಿಸಿ ಗಮನಿಸಿದಾಗ ನಾನು ಹೇಳಿರುವ ಎಲ್ಲಾ ಅಂಶಗಳು ನಿಜವಾಗಿದೆ. ಒಬ್ಬ ರಾಜಕೀಯ ವಿಶ್ಲೇಷಕನಾಗಿ, ತಂತ್ರಗಾರನಾಗಿ ಚುನಾವಣಾ ಭವಿಷ್ಯ ನುಡಿಯುವುದು ತಪ್ಪು. ಮುಂದೆಂದೂ ಅಂತಹ ತಪ್ಪಿ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.