ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲು; ಕಾಂಗ್ರೆಸ್ ಕೈ ಹಿಡಿದ ಮತದಾರ
ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲನ್ನು ಅನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ.
ಈ ಬಾರಿ ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣೆಯ ಮತದಾನಕ್ಕೆ ಒಂದೆರಡು ದಿನ ಮುನ್ನ ಹಾಸನದಲ್ಲಿ ಪೆನ್‌ಡ್ರೈವ್ ಹಗರಣ ಭಾರೀ ಸದ್ದು ಮಾಡಿತು. ಇದರ ನಡುವೆಯೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮತ್ತೊಂದು ಅವಧಿಗೆ ಗೆಲುವು ಸಾಧಿಸುವ ಆಶಯದಲ್ಲಿದ್ದರು. ಆದರೆ, ಪ್ರಜ್ವಲ್ ರೇವಣ್ಣ ಅವರನ್ನು ಒಪ್ಪದ ಮತದಾರ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ಮಣೆ ಹಾಕಿದ್ದಾರೆ.
25 ವರ್ಷಗಳ ಬಳಿಕ ಹಾಸನ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ವಾಲಿದೆ. 25 ವರ್ಷಗಳ ಹಿಂದೆ ಪುಟ್ಟಸ್ವಾಮಿ ಗೌಡರನ್ನು ಎಚ್. ಡಿ. ದೇವೇಗೌಡರು ಸೋಲಿಸಿದ್ದರು. ಇದೀಗ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಅವರು ಮಣಿಸಿದ್ದಾರೆ.
ಪೆನ್‌ಡ್ರೈವ್ ಪ್ರಕರಣದಿಂದ ಹಾಸನ ಲೋಕಸಭಾ ಕ್ಷೇತ್ರ ಭಾರೀ ಚರ್ಚೆಯಲ್ಲಿದೆ. ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಸದ್ಯ ಪ್ರಜ್ವಲ್ ರೇವಣ್ಣ ಅವರು ಎಸ್‌ಐಟಿ ವಶದಲ್ಲಿದ್ದು ತನಿಖೆ ಎದುರಿಸುತ್ತಿರುವ ನಡುವೆಯೇ ಸಂಸತ್ ಸದಸ್ಯ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಶ್ರೇಯಸ್ ಪಟೇಲ್ ಸೋಲಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಪಡೆದ ಮತ...
ಪ್ರಜ್ವಲ್ ರೇವಣ್ಣ-ಎನ್‌ಡಿಎ (ಜೆಡಿಎಸ್) 5,17,277 (ಸೋಲು)
ಎಂ. ಶ್ರೇಯಸ್ ಪಟೇಲ್-ಕಾಂಗ್ರೆಸ್ 5,47,091 (ಗೆಲುವು)
ಕಳೆದ ಬಾರಿಯ ಫಲಿತಾಂಶ ಏನಾಗಿತ್ತು?
2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು. ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ನೀಡಿತ್ತು. ಏಕೆಂದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ. ಮಂಜು ಸುಮಾರು 5 ಲಕ್ಷದ 35 ಸಾವಿರ ಮತಗಳನ್ನು ಗಳಿಸಿದ್ದರಾದರೂ, 6 ಲಕ್ಷದ 76 ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು.
ಈ ಬಾರಿ 2024ರ ಲೋಕಸಭ ಚುನಾವಣೆಯಲ್ಲಿ ಹಾಲಿ ಸಂಸದ ಪ್ರಜ್ವಲ್ ರೇವಣ್ಣಗೆ ಬಿಜೆಪಿ ಬೆಂಬಲ ನೀಡಿತ್ತು. ಪ್ರಜ್ವಲ್ ರೇವಣ್ಣ ಎನ್‌ಡಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಪಕ್ಷವು ಮಾಜಿ ಸಂಸದ ದಿವಂಗತ ಜಿ. ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಎಂ. ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಿತ್ತು.