
ರಹ್ಮಾನ್ ಹತ್ಯೆ ಪ್ರಕರಣ; ಮಂಗಳೂರು-ಬಂಟ್ವಾಳ ರಸ್ತೆಯಲ್ಲಿರುವ ನೂರಾರು ಅಂಗಡಿಗಳು ಸ್ವಯಂಪ್ರೇರಿತ ಬಂದ್; ಶಾಂತಿಯುತವಾಗಿ ಸಾಗಿದ ಮೃತದೇಹ ಮೆರವಣಿಗೆ
ಮಂಗಳೂರು: ಅಮಾಯಕ ಬಂಟ್ವಾಳದ ರಹ್ಮಾನ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿನಿಂಂದ ಬಂಟ್ವಾಳದವರೆಗಿನ ನೂರಾರು ಅಂಗಡಿಗಳನ್ನು ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾದ ಅಬ್ದುಲ್ ರಹ್ಮಾನ್ ಅವರ ಮೃತದೇಹವನ್ನು ಕೊಳ್ತಮಜಲಿಗೆ ಬುಧವಾರ ಬೆಳಗ್ಗೆ ಸಾಗಿಸಲಾಯಿತು. ಕುತ್ತಾರ್ ಮದನಿ ನಗರ ಮಸೀದಿಯಲ್ಲಿ ರಹ್ಮಾನ್ ಅವರ ಮಯ್ಯತ್ ಸ್ನಾನ ಮಾಡಲಾಯಿತು. ನಂತರ ಮಯ್ಯತ್ ನಮಾಝ್ ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ಮೃತದೇಹವನ್ನು ಮೆರವಣಿಗೆಯ ಮೂಲಕ ಸಾಗಿಸಲಾಯಿತು. ಈ ವೇಳೆ ಸಾವಿರಾರು ಜನ ಸೇರಿದ್ದರು. ಅಲ್ಲದೇ ಹತ್ಯೆ ಖಂಡಿಸಿ ಮಂಗಳೂರಿನಿಂದ ಬಂಟ್ವಾಳದವರೆಗೆ ಅಂಗಡಿಗಳ ಮುಂಗಟ್ಟುಗಳು ಬಂದ್ ಮಾಡಿ ಮುಸ್ಲಿಮ್ ವ್ಯಾಪಾರಿಗಳು ಸಹ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವಿಪರೀತ ಮಳೆಯ ನಡುವೆ ರಹೀಂ ಮೃತ ದೇಹ ರವಾನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುತ್ತಮುತ್ತಲಿನ ಆರು ಜಿಲ್ಲೆಗಳ ಹೆಚ್ಚುವರಿ ಪೊಲೀಸರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ರವಾನೆ ಮಾಡಲಾಗಿದೆ.
ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಗೆ ತಿಂಗಳು ಕಳೆಯುವ ಮೊದಲೇ ಮುಸ್ಲಿಂ ಯುವಕನ ಬರ್ಬರ ಹತ್ಯೆ ನಡೆದಿದೆ. ಮಂಗಳವಾರ ಮಧ್ಯಾಹ್ನ 3:30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹ್ಮಾನ್ ಯಾನೆ ರಹೀಂ(34) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು.
ಪಿಕಪ್ ವಾಹನ ಹೊಂದಿರುವ ಅಬ್ದುಲ್ ರಹೀಂ ಬಳಿ ಒಂದು ಲೋಡ್ ಮರಳು ಬೇಕು ಎಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದರು. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ. ಈ ವೇಳೆ ಕಲಂದರ್ ಶಾಫಿ ಅವರನ್ನು ಕೊಲೆಗೆ ಯತ್ನಿಸಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಂಟ್ವಾಳ ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
ರಹೀಂ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಸೇರಿದ ಜನ ಆಕ್ರೋಶ ಹೊರಹಾಕಿದ್ದಾರೆ.