
ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ; ಸಿರಾಜ್ ಗೆ 5 ವಿಕೆಟ್ ಗೊಂಚಲು: ಸರಣಿ ಡ್ರಾನಲ್ಲಿ ಅಂತ್ಯ
ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದಲ್ಲಿ ಕೊನೆಗೊಂಡಿದೆ. ಓವಲ್ನಲ್ಲಿ ನಡೆದ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ರಣರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲು ಕೊನೆಯ ದಿನದಲ್ಲಿ 35 ರನ್ ಬೇಕಿದ್ದರೆ, ಇತ್ತ ಟೀಂ ಇಂಡಿಯಾ ಗೆಲ್ಲಲು 4 ವಿಕೆಟ್‌ಗಳ ಅವಶ್ಯಕತೆ ಇತ್ತು. ಅದರಂತೆ ಐದನೇ ದಿನದಾಟ ಆರಂಭವಾದ ಕೆಲವೇ ಕೆಲವು ಓವರ್ಗಳಲ್ಲಿ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡುವ ಮೂಲಕ ಟೀಂ ಇಂಡಿಯಾ 6 ರನ್‌ಗಳ ವೀರೋಚಿತ ಗೆಲುವು ಸಾಧಿಸಿತು. ಟೀಂ ಇಂಡಿಯಾದ ಈ ಗೆಲುವಿನ ಶ್ರೇಯ ವೇಗಿ ಮೊಹಮ್ಮದ್ ಸಿರಾಜ್ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸಲ್ಲಬೇಕು. ಎರಡನೇ ಇನ್ನಿಂಗ್ಸ್ನಲ್ಲಿ ಮಾರಕ ದಾಳಿ ಸಂಘಟಿಸಿದ ಮೊಹಮ್ಮದ್ ಸಿರಾಜ್ 5 ವಿಕೆಟ್‌ಗಳ ಗೊಂಚಲು ಪಡೆದರೆ, ಇತ್ತ ಪ್ರಸಿದ್ಧ್ 4 ವಿಕೆಟ್ ಪಡೆದರು. ಉಳಿದ 1 ವಿಕೆಟ್ ಆಕಾಶ್ ದೀಪ್ ಪಾಲಾಯಿತು.
ಮೇಲೆ ಹೇಳಿದಂತೆ ಕೊನೆಯ ದಿನದಂದು ಇಂಗ್ಲೆಂಡ್ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು. ಇತ್ತ ಭಾರತಕ್ಕೆ 4 ವಿಕೆಟ್‌ಗಳ ಅಗತ್ಯವಿತ್ತು. ಐದನೇ ದಿನದ ಮೊದಲ ಓವರ್‌ನಲ್ಲಿ, ಕ್ರೇಗ್ ಓವರ್ಟನ್ 2 ಬೌಂಡರಿಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್‌ಗೆ ಬಲವಾದ ಆರಂಭವನ್ನು ನೀಡಿದರು. ಆದರೆ ಮುಂದಿನ ಓವರ್‌ನಲ್ಲಿ ಸಿರಾಜ್, ಜೇಮೀ ಸ್ಮಿತ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಪಂದ್ಯವನ್ನು ರೋಮಾಂಚನಗೊಳಿಸಿದರು. ನಂತರ ಸಿರಾಜ್ ಮುಂದಿನ ಓವರ್‌ನಲ್ಲಿ ಕ್ರೇಗ್ ಓವರ್ಟನ್ ಅವರನ್ನು ಸಹ ಪೆವಿಲಿಯನ್‌ಗಟ್ಟುವ ಮೂಲಕ ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು.
ಇದಾದ ನಂತರ ದಾಳಿಗಿಳಿದ ಪ್ರಸಿದ್ಧ್ ಕೃಷ್ಣ, ಜೋಶ್ ಟಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ನ 9 ನೇ ವಿಕೆಟ್ ಉರುಳಿಸಿದರು. ಇಂಜುರಿಯ ನಡುವೆಯೂ ಒಂದೇ ಕೈನಲ್ಲಿ ಬ್ಯಾಟ್ ಹಿಡಿದು ಕೊನೆಯ ವಿಕೆಟ್ ಆಗಿ ಕ್ರಿಸ್ಗೆ ಬಂದ ಕ್ರಿಸ್ ವೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಒಟ್ಟಾಗಿ ಇಂಗ್ಲೆಂಡ್ ತಂಡವನ್ನು ಗುರಿಯ ಹತ್ತಿರಕ್ಕೆ ತಂದರು. ಆದರೆ ಕೊನೆಯಲ್ಲಿ ಸಿರಾಜ್ ಅಟ್ಕಿನ್ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಇಂಗ್ಲೆಂಡ್ ತಂಡವನ್ನು 367 ರನ್‌ಗಳಿಗೆ ಆಲೌಟ್ ಮಾಡಿ ಭಾರತ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಇದರೊಂದಿಗೆ ಟೆಸ್ಟ್ ಸರಣಿ 2-2 ಡ್ರಾದಲ್ಲಿ ಕೊನೆಗೊಂಡಿತು. ಅಲ್ಲದೆ, ಸಿರಾಜ್ ಸರಣಿಯಲ್ಲಿ ಅತಿ ಹೆಚ್ಚು 23 ವಿಕೆಟ್‌ಗಳನ್ನು ಪಡೆದರು.