
ಬೀದರ್ ಮಳೆ ಹಾನಿ; ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯಿಂದ ಜಿಲ್ಲೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ- ತ್ವರಿತ ಕ್ರಮಕ್ಕೆ ಸೂಚನೆ
ಬೆಂಗಳೂರು: ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ಮಂಗಳವಾರ ಬೆಂಗಳೂರಿನಿಂದಲೇ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಓ, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಬೀದರ್ ಜಿಲ್ಲೆಯಲ್ಲಿನ ಮಳೆ ಹಾನಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಕಳೆದ 2-3 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಸೇತುವೆಗಳು ಕೊಚ್ಚಿಹೋಗಿವೆ, ಮನೆಗಳು ಹಾನಿಗೊಳಗಾಗಿವೆ, ಜಾನುವಾರುಗಳು ಮೃತಪಟ್ಟಿವೆ. ಈ ಹಿನ್ನೆಲೆಯಲ್ಲಿ ಯಾವುದೇ ವಿಳಂಬವಿಲ್ಲದೆ ಪರಿಹಾರ ವಿತರಣೆ ನಡೆಸುವಂತೆ ಅಧಿಕಾರಿಗಳಿಗೆ ಕಡ್ಡಾಯ ಸೂಚನೆ ನೀಡಿದರು.
ಸಭೆಯಲ್ಲಿ ನೀಡಿದ ಮುಖ್ಯ ಸೂಚನೆಗಳು:
✅ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಧಾನ್ಯ, ಬಟ್ಟೆ, ಪಾತ್ರೆ ಹಾಳಾದ ಪ್ರಕರಣಗಳಲ್ಲಿ ತಕ್ಷಣ ₹5,000 ಪರಿಹಾರ ನೀಡಬೇಕು.
✅ ಮನೆಗಳಿಗೆ ಆಗಿರುವ ಹಾನಿಯ ಪ್ರಮಾಣ ತಿಳಿಯಲು ಎಂಜಿನಿಯರ್‌ಗಳನ್ನು ಕಳುಹಿಸಿ, 48 ಗಂಟೆಯೊಳಗೆ ಸಮಗ್ರ ವರದಿ ತರಿಸಬೇಕು.
✅ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ನಿಯಮಗಳಂತೆ ಪರಿಹಾರ ನೀಡಬೇಕು.
✅ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಬೆಳೆಗೆ ಹಾನಿ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳಿಸಬೇಕು.
✅ ಸೇತುವೆಗಳು ಕುಸಿದು, ರಸ್ತೆ ಸಂಪರ್ಕ ಕಡಿದುಕೊಂಡಿರುವ ಗ್ರಾಮಗಳಿಗೆ ತುರ್ತಾಗಿ ಪರ್ಯಾಯ ಸಂಪರ್ಕ ಕಲ್ಪಿಸಿ, ಪುನರ್ ನಿರ್ಮಾಣಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು.
✅ ಕಳಪೆ ಕಾಮಗಾರಿಯಿಂದ ರಸ್ತೆ/ಸೇತುವೆ ಹಾನಿಯಾಗಿದ್ದರೆ ಅದರ ಕುರಿತು ಅಧ್ಯಯನ ಮಾಡಿ ವರದಿ ನೀಡಬೇಕು.
✅ ಇಂದು ಸಂಜೆ ಅಥವಾ ರಾತ್ರಿ ಒಳಗಾಗಿ ವಿದ್ಯುತ್ ಸಂಪರ್ಕ ಪುನರ್ ಸ್ಥಾಪನೆ ಮಾಡಲು ಎಚ್ಚರಿಕೆ ನೀಡಲಾಗಿದೆ.
✅ ಆಂಗನವಾಡಿ, ಸರ್ಕಾರಿ ಶಾಲೆ ಮತ್ತು ಕಾಲೇಜು ಕಟ್ಟಡಗಳು ಶಿಥಿಲವಾಗಿದ್ದರೆ, ತಕ್ಷಣ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಯಾವುದೇ ದುರಂತ ಸಂಭವಿಸಿದರೆ ಸಂಬಂಧಿತ ಶಾಲಾ ಅಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆ ನೀಡಲಾಗಿದೆ.
✅ ಸೇತುವೆಗಳು ಕೊಚ್ಚಿಹೋಗಿರುವ ಪ್ರದೇಶಗಳಲ್ಲಿ ಜನರು ಸಂಚರಿಸದಂತೆ ಪೊಲೀಸ್ ಕಾವಲು ಮತ್ತು ತಾತ್ಕಾಲಿಕ ತಡೆಗೋಡೆ ಹಾಕಬೇಕು.
✅ ಪ್ರವಾಹ ಪರಿಸ್ಥಿತಿಯಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆಗೆ ವಿಶೇಷ ನಿಗಾವಹಿಸಲು ಸೂಚಿಸಲಾಗಿದೆ.
✅ ಪದೇಪದೇ ಪ್ರವಾಹದಿಂದ ತೊಂದರೆ ಅನುಭವಿಸುತ್ತಿರುವ ಕುಟುಂಬಗಳನ್ನು ಸರ್ಕಾರಿ ಜಮೀನಿನಲ್ಲಿ ಸ್ಥಳಾಂತರಿಸುವ ಶಾಶ್ವತ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
✅ ಪಿಡಿಓಗಳು ಕಚೇರಿಯಲ್ಲೇ ಕುಳಿತುಕೊಳ್ಳದೆ, ಮಳೆ ಪೀಡಿತ ಪ್ರದೇಶಗಳಿಗೆ ತೆರಳಿ ಪರಿಹಾರ ಕಾರ್ಯಾಚರಣೆ ನಡೆಸಬೇಕು.
✅ ಕೆರೆಗಳ ದಂಡೆ ಒಡೆದಿದ್ದರೆ ತಕ್ಷಣ ತಜ್ಞರನ್ನು ಕಳುಹಿಸಿ ದುರಸ್ತಿ ಕಾರ್ಯ ಕೈಗೊಳ್ಳಬೇಕು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬಡೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಜಿಲ್ಲಾ ವೈದ್ಯಾಧಿಕಾರಿ ಡಾ. ನಿರ್ಗುಡೆ ಸೇರಿದಂತೆ ಹಲವಾರು ಅಧಿಕಾರಿಗಳು ಪಾಲ್ಗೊಂಡಿದ್ದರು.
ಜನರ ಜೀವ ಹಾನಿ ಸಂಭವಿಸದಂತೆ ತಕ್ಷಣದ ಕ್ರಮಗಳು ನಡೆಯಬೇಕೆಂದು ಸೂಚಿಸಿದರು.
ಜಿಲ್ಲೆ ಜನರು ಎಚ್ಚರಿಕೆಯಿಂದಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸ್ಥಳೀಯ ಅಧಿಕಾರಿಗಳನ್ನು ತಕ್ಷಣ ಸಂಪರ್ಕಿಸುವಂತೆ ಮನವಿ ಮಾಡಿದರು.