ಉಡುಪಿ; ಆಪ್ತರಿಂದಲೇ ಸೈಫುದ್ದೀನ್ ಹತ್ಯೆ: ತೀವ್ರಗೊಂಡ ಪೊಲೀಸ್ ತನಿಖೆ
ಉಡುಪಿ: ಮಲ್ಪೆ ಸಮೀಪದ ಕೊಡವೂರು ಸಾಲ್ಮರ ಎಂಬಲ್ಲಿ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫುದ್ದೀನ್ ಅತ್ರಾಡಿ (52) ತನ್ನ ಆಪ್ತರಿಂದಲೇ ಬರ್ಬರವಾಗಿ ಹತ್ಯೆಗೀಡಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳ್ಸಿದ್ದಾರೆ.
ಸೈಫುದ್ದೀನ್ ಸ್ನೇಹಿತರಾದ ಉಡುಪಿ ಕುಕ್ಕಿಕಟ್ಟೆಯ ನಿವಾಸಿ ಫೈಝಲ್ ಖಾನ್ ಮತ್ತು ಉಡುಪಿ ದೊಡ್ಡಣಗುಡ್ಡೆ ನಿವಾಸಿ ಶರೀಫ್ ಎಂಬವರು ಈ ಕೃತ್ಯ ಎಸಗಿರುವುದಾಗಿ ದೂರಲಾಗಿದ್ದು, ಇವರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇವರೊಂದಿಗೆ ಇತರರು ಕೂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲ ಸೈಫ್ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದವರೆಂಬುದು ತಿಳಿದು ಬಂದಿದೆ.
ಆತ್ರಾಡಿಯ ಉದ್ಯಮಿ ದಿ.ಅಬ್ದುಲ್ ಖಾದರ್ ಅವರ ಮಗನಾದ ಸೈಫುದ್ದೀನ್ ಹಲವು ವರ್ಷಗಳಿಂದ ಬಸ್ ವ್ಯವಹಾರ ನಡೆಸಿಕೊಂಡು ಬರುತ್ತಿದ್ದಾನೆ. ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ರೌಡಿ ಶೀಟರ್ ಆಗಿದ್ದ ಸೈಫ್, ಇತ್ತೀಚೆಗೆ 30-35 ಬಸ್‌ಗಳ ಮಾಲಕರಾಗಿದ್ದನು. ಬಸ್ಸಿಗೆ ತನ್ನ ತಂದೆಯ ಹೆಸರನ್ನು ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದನು.
ಅದೇ ರೀತಿ ಮುಂಬೈಯಲ್ಲೂ ಹೊಟೇಲ್ ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದ ಸೈಫ್, ಇಲ್ಲಿನ ಬಸ್‌ಗಳನ್ನು ಮಾರಾಟಕ್ಕೆ ಯೋಜಿಸಿದ್ದನು ಎಂದು ತಿಳಿದುಬಂದಿದೆ. ಆತ್ರಾಡಿ ಮೂಲದ ಸೈಫ್, ಹಲವು ವರ್ಷಗಳಿಂದ ಮಲ್ಪೆ ಸಮೀಪದ ಕೊಡವೂರು ಸಾಲ್ಮರ ಎಂಬಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದು, ಎರಡು ವರ್ಷಗಳ ಹಿಂದೆ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಹೊಸ ಮನೆ ನಿರ್ಮಿಸಿ, ಅಲ್ಲಿಗೆ ಶಿಫ್ಟ್ ಆಗಿದ್ದರು.
ಸ್ನೇಹಿತರಿಂದ ಹತ್ಯೆಗೆ ಸಂಚು: ಇಂದು ಬೆಳಗ್ಗೆ ಫೈಝಲ್ ಖಾನ್, ಸೈಫ್‌ನ ಮಣಿಪಾಲದ ಮನೆಗೆ ಬಂದು ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗಲು ಇದೆ ಎಂದು ಹೇಳಿದ್ದನು. ಅದರಂತೆ ಸೈಫುದ್ದೀನ್ ಕಾರಿನಲ್ಲಿ ಫೈಝಲ್ ಖಾನ್ ಜೊತೆ ತೆರಳಿದ್ದನು.
ದಾರಿ ಮಧ್ಯೆ ಇವರ ಕಾರಿನಲ್ಲಿ ಶರೀಫ್ ಹಾಗೂ ಇತರರು ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಂಗಳೂರು ಹೋಗುವ ಬದಲು ಇವರು ಕೊಡವೂರಿನ ಮನೆಗೆ ತೆರಳಿದ್ದು, ಅಲ್ಲಿ ಮನೆ ಬಾಗಿಲು ತೆರೆದು ಒಳಗೆ ಹೋಗುತ್ತಿದ್ದ ಸೈಫ್‌ಗೆ ಆರೋಪಿಗಳು ಹಿಂದಿನಿಂದ ತಲವಾರು ಮತ್ತು ಚೂರಿಯಿಂದ ದಾಳಿ ನಡೆಸಿದರೆಂದು ತಿಳಿದುಬಂದಿದೆ.
ಬೆನ್ನು ಹಾಗೂ ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಸೈಫ್, ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಬಳಿಕ ಆರೋಪಿಗಳು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕೃತ್ಯದಲ್ಲಿ ಮೂವರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ಎಸ್.ನಾಯ್ಕ್, ಡಿವೈಎಸ್ಪಿ ಪ್ರಭು ಡಿ.ಟಿ., ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಡಿಗೇರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸೈಯಿಪುದ್ದಿನ್ ಮಗ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆಗಾಗಿ ಮೂರು ತಂಡ ರಚನೆ: ಎಸ್ಪಿ ಹರಿರಾಂ ಶಂಕರ್
ಸೈಫುದ್ದೀನ್ ಕೊಲೆ ಪ್ರಕರಣದ ತನಿಖೆಗಾಗಿ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.
ಈ ಕೃತ್ಯವನ್ನು ಆತನ ಬಸ್ಸಿನಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಮೂವರು ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇವರು ಮೂವರು ಆರೋಪಿಗಳು ಏಕಕಾಲದಲ್ಲಿ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಕೊಲೆಗೆ ಕಾರಣ ಮತ್ತು ಉಳಿದ ಆರೋಪಿಗಳ ಮಾಹಿತಿ ತನಿಖೆಯಿಂದ ಲಭ್ಯವಾಗಬೇಕಾಗಿದೆ ಎಂದರು.
ಕೊಲೆ, ಕೊಲೆಯತ್ನ, ಬೆದರಿಕೆ ಸೇರಿದಂತೆ 18 ಪ್ರಕರಣಗಳಲ್ಲಿ ಭಾಗಿ
ಮೃತ ಸೈಫುದ್ದೀನ್ ಕೊಲೆ, ಕೊಲೆಯತ್ನ, ಬೆದರಿಕೆ ಸೇರಿದಂತೆ ಸುಮಾರು 18 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಉಡುಪಿ ಮತ್ತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದನು.
1997ರಲ್ಲಿ ನಡೆದ ಆತ್ರಾಡಿಯ ಪುಂಡಲೀಕ, 2020ರ ಫೆ.10ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿಯಲ್ಲಿ ನಡೆದ ಉತ್ತರ ಪ್ರದೇಶ ಮೂಲದ, ನ್ಯೂಮುಂಬೈಯ ಮಾಯಾ ಹೊಟೇಲ್ ಮಾಲಕ ವಶಿಷ್ಠ ಯಾದವ್ ಕೊಲೆ ಪ್ರಕರಣ, 2016ರ ಜು.14ರಂದು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೆಮ್ಮಣ್ಣುವಿನ ಶೇಖ್ ಮಹಮ್ಮದ್ ತಸ್ಲೀಮ್ ಕೊಲೆ ಪ್ರಕರಣಗಳಲ್ಲಿ ಸೈಫ್ ಪ್ರಮುಖ ಆರೋಪಿಯಾಗಿದ್ದನು.
ಇದರಲ್ಲಿ ವಶಿಷ್ಟ ಯಾದವ್ ಕೊಲೆ ಪ್ರಕರಣದಲ್ಲಿ ಇದೀಗ ಸೈಫ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಶರೀಫ್ ಕೂಡ ಆರೋಪಿಯಾಗಿದ್ದನು. ಅಲ್ಲದೆ ವಶಿಷ್ಟ ಪ್ರಕರಣದಲ್ಲಿದ್ದ ಇನ್ನಿಬ್ಬರು ಆರೋಪಿಗಳು ಕೂಡ ಸೈಫ್ ಕೊಲೆಯಲ್ಲಿ ಭಾಗಿಯಾಗಿದ್ದಾರೆನ್ನಲಾಗಿದೆ.
ಹಿಂದೆಯೂ ನಡೆದಿತ್ತು ಕೊಲೆಯತ್ನ
ಕೊಲೆ ಸಹಿತ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ವೈರತ್ವ ಕಟ್ಟಿಕೊಂಡಿದ್ದ ಸೈಪುದ್ದೀನ್‌ನನ್ನು 2020ರ ನ.4ರಂದು ಕೊಲೆಗೆ ಯತ್ನ ನಡೆದಿತ್ತು. ಆ ಸಂದರ್ಭದಲ್ಲಿ ಸೈಫ್ ಸ್ವಲ್ಪದರಲ್ಲಿಯೇ ಪಾರಾಗಿ ಜೀವ ಉಳಿಸಿಕೊಂಡಿದ್ದರು.
ತಂಡವೊಂದು ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿರುವ ಎಕೆಎಂಎಸ್ ಕಚೇರಿಗೆ ನುಗ್ಗಿ ಸೈಫುದ್ದೀನ್ ಹತ್ಯೆಗೆ ವಿಫಲ ಯತ್ನ ನಡೆಸಿ ಪರಾರಿಯಾಗಿತ್ತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಈ ಸಂಬಂಧ 9ಮಂದಿ ಆರೋಪಿಗಳನ್ನು ಬಂಧಿಸಿದ್ದರು.