ಉಡುಪಿ-ಉಚ್ಚಿಲ ದಸರಾದಲ್ಲಿ ಜನ ಮನಸೂರೆಗೊಂಡ ಸಾಮೂಹಿಕ ದಾಂಡಿಯಾ ನೃತ್ಯ ವೈಭವ! ದಾಂಡಿಯಾ ನೃತ್ಯದಲ್ಲಿ ಸಾಂಪ್ರದಾಯಿಕ ಶೈಲಿಯ ದಿರಿಸಿನೊಂದಿಗೆ ಪಾಲ್ಗೊಂಡ ಯುವತಿಯರು

ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಇಲ್ಲಿನ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುತ್ತಿರುವ 'ಉಡುಪಿ–ಉಚ್ಚಿಲ ದಸರಾ'ದಲ್ಲಿ ಶನಿವಾರ ಕ್ಷೇತ್ರದ ರಥಬೀದಿಯ ಸುತ್ತ ಸಾರ್ವಜನಿಕರಿಂದ ಆಯೋಜಿಸಲಾಗಿದ್ದ 'ಸಾಮೂಹಿಕ ದಾಂಡಿಯಾ ನೃತ್ಯ' ನೋಡುಗರ ಗಮನ ಸೆಳೆಯಿತು.
ಕ್ಷೇತ್ರದ ರಥಬೀದಿಯ ಸುತ್ತ ಮಹಿಳೆಯರು, ಮಕ್ಕಳು, ಯುವಕರು ಹಾಗೂ ವೃದ್ಧರು ಎನ್ನದೆ ಆಸಕ್ತರೆಲ್ಲರೂ ಸಂಭ್ರಮದಿಂದ ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುವ ದೃಶ್ಯ ಕಂಡು ಬಂತು. ಹೆಚ್ಚಿನ ಮಹಿಳೆಯರು, ಯುವತಿಯರು ಸಾಂಪ್ರದಾಯಿಕ ಶೈಲಿಯ ದಿರಿಸಿನೊಂದಿಗೆ ಪಾಲ್ಗೊಂಡು ಸಂಭ್ರಮಿಸಿದರು. ನೃತ್ಯ ನೋಡಲೆಂದೇ ನೂರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಗಳ ಸುತ್ತಮುತ್ತ ಜಮಾಯಿಸಿದ್ದು, ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಕೋಲಾಟದ ರೀತಿ ಎಲ್ಲರೂ ಎರಡು ಕೋಲು ಹಿಡಿದು ಭಕ್ತಿಗೀತೆ ಹಾಗೂ ಸಿನಿಮಾ ಹಾಡಿಗೆ ವೃತ್ತಾಕಾರದಲ್ಲಿ ಹೆಜ್ಜೆ ಹಾಕಿದರು.
ಡಾ.ನಾಡೋಜ ಜಿ.ಶಂಕರ್, ಉಡುಪಿ ಶಾಸಕ ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಸೇರಿದಂತೆ ಮತ್ತಿತರ ಗಣ್ಯರು ಸೇರಿ ದಾಂಡಿಯಾ ನೃತ್ಯಕ್ಕೆ ಚಾಲನೆ ನೀಡಿದರು.
ಐವನ್ ಡಿಸೋಜ ಭೇಟಿ
ಇದಕ್ಕೂ ಮೊದಲು ದಸರಾ ಸಮಾರಂಭಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ನವದುರ್ಗೆಯರು ಹಾಗು ಶಾರದಾ ಮಾತೆಯ ವಿಗ್ರಹವನ್ನು ನಿರ್ಮಾಣ ಮಾಡಿದ ಕುಬೇರ ಅವರನ್ನು ಸ್ಮರಣಿಕ, ಶಾಲು ಹೊದಿಸಿ ಗೌರವಿಸಲಾಯಿತು. ಇದೇ ವೇಳೆ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಗಣೇಶ್ ಕಾಂಚನ್, ದಿಲೀಪ್ ಮುಲ್ಕಿ, ದಯಾವತಿ ಪುತ್ರನ್, ಪ್ರೀತಿ ಶ್ರೀಯಾನ್, ಶೈಲಜಾ ಮೆಂಡನ್, ಪ್ರಾಪ್ತಿ ಸುವರ್ಣ, ಸುರೇಖಾ ಪುತ್ರನ್, ಸುಧಾಕರ ಕರ್ಕೇರ ಅವರನ್ನು ನಾಡೋಜ ಡಾ.ಜಿ.ಶಂಕರ್ ಸನ್ಮಾನಿಸಿ ಗೌರವಿಸಿದರು.











