ಅಲ್ ಹಿಂದ್ ಏರ್, ಫ್ಲೈಎಕ್ಸ್‌ಪ್ರೆಸ್ ಸೇರಿದಂತೆ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರಕಾರದಿಂದ ಅನುಮತಿ

ಅಲ್ ಹಿಂದ್ ಏರ್, ಫ್ಲೈಎಕ್ಸ್‌ಪ್ರೆಸ್ ಸೇರಿದಂತೆ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರಕಾರದಿಂದ ಅನುಮತಿ

ನವದೆಹಲಿ: ಇತ್ತೀಚಿಗೆ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ವಿಮಾನ ಕಾರ್ಯಾಚರಣೆಯಲ್ಲಿ ಭಾರಿ ಅವ್ಯವಸ್ಥೆ ಉಂಟಾದ ನಂತರ ವಿಮಾನಯಾನ ಮಾರುಕಟ್ಟೆಯಲ್ಲಿ ಏಕಸ್ವಾಮ್ಯತೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬುಧವಾರ ಮೂರು ಹೊಸ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಿದ್ದು, ಅವು ಶೀಘ್ರದಲ್ಲೇ ಭಾರತೀಯ ವಿಮಾನಯಾನ ಸೇವೆ ಆರಂಭಿಸಲಿವೆ.

ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಈ ವಾರ ಕೇಂದ್ರದಿಂದ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು(ಎನ್‌ಒಸಿ) ಪಡೆದಿವೆ. ಮತ್ತೊಂದು ವಿಮಾನಯಾನ ಸಂಸ್ಥೆ ಶಂಖ್ ಏರ್ ಈ ಹಿಂದೆ ತನ್ನ ಅನುಮತಿಯನ್ನು ಪಡೆದುಕೊಂಡಿತ್ತು.

ಡಿಸೆಂಬರ್ ಮೊದಲ ವಾರದಲ್ಲಿ ಇಂಡಿಗೋ ವಿಮಾನ ಕಾರ್ಯಾಚರಣೆಯ ಅಡಚಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ದೇಶೀಯ ವಿಮಾನಯಾನ ವಲಯದಲ್ಲಿ ಏಕಸ್ವಾಮ್ಯತೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು.

ಭಾರತದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಯಸುವ ಸಂಭಾವ್ಯ ವಿಮಾನಯಾನ ಸಂಸ್ಥೆಗಳಾದ ಶಂಖ್ ಏರ್, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್‌ ತಂಡಗಳೊಂದಿಗೆ ಕಳೆದ ವಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಡೆಸಿದ ಸಭೆಯ ನಂತರ ಈ ಅನುಮತಿ ನೀಡಲಾಗಿದೆ.

"ಶಂಖ್ ಏರ್ ಈಗಾಗಲೇ ಸಚಿವಾಲಯದಿಂದ NOC ಪಡೆದಿದ್ದರೆ, ಅಲ್ ಹಿಂದ್ ಏರ್ ಮತ್ತು ಫ್ಲೈಎಕ್ಸ್‌ಪ್ರೆಸ್ ಈ ವಾರ ತಮ್ಮ NOC ಗಳನ್ನು ಪಡೆದಿವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನೀತಿಗಳಿಂದಾಗಿ ವಿಶ್ವದ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತೀಯ ವಿಮಾನಯಾನದಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಸಚಿವಾಲಯದ ಪ್ರಯತ್ನವಾಗಿದೆ. ಉಡಾನ್‌ನಂತಹ ಯೋಜನೆಗಳು ದೇಶದೊಳಗಿನ ಪ್ರಾದೇಶಿಕ ಸಂಪರ್ಕದಲ್ಲಿ ಪ್ರಮುಖ ಪಾತ್ರ ವಹಿಸಲು ಸಣ್ಣ ವಿಮಾನಯಾನ ಸಂಸ್ಥೆಗಳಾದ ಸ್ಟಾರ್ ಏರ್, ಇಂಡಿಯಾ ಒನ್ ಏರ್, ಫ್ಲೈ91 ಇತ್ಯಾದಿಗಳನ್ನು ಸಕ್ರಿಯಗೊಳಿಸಿವೆ ಮತ್ತು ಮುಂದಿನ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ" ಎಂದು ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article