ಹೊಸ ವರ್ಷಾಚರಣೆಗೆ ಮಾರಾಟಕ್ಕೆ ತಂದಿದ್ದ  21 ಕೆ.ಜಿ ಗಾಂಜಾ ವಶ; ಇಬ್ಬರನ್ನು ಬಂಧಿಸಿದ ಸುರತ್ಕಲ್  ಪೊಲೀಸರು

ಹೊಸ ವರ್ಷಾಚರಣೆಗೆ ಮಾರಾಟಕ್ಕೆ ತಂದಿದ್ದ 21 ಕೆ.ಜಿ ಗಾಂಜಾ ವಶ; ಇಬ್ಬರನ್ನು ಬಂಧಿಸಿದ ಸುರತ್ಕಲ್ ಪೊಲೀಸರು

ಸುರತ್ಕಲ್ : ಹೊಸ ವರ್ಷಾಚರಣೆಗೆಂದು ಮಾರಾಟ ಮಾಡಲು ತಂದಿದ್ದ ಸುಮಾರು 21ಕೆ.ಜಿ ಗಾಂಜಾವನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಉಳಾಯಿಬೆಟ್ಟು ಗ್ರಾಮ ನಿವಾಸಿ ಪ್ರದೀಪ್ ಪೂಜಾರಿ(32), ಬೈಕಂಪಾಡಿ ಚಿತ್ರಾಪುರ ನಿವಾಸಿ ವಸಂತ (42) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ‌.

ಬಂಧಿತರಿಂದ ಅಂದಾಜು 10,72,500 ರೂ‌. ಮೊತ್ತದ 21.450 ಕೆಜಿ ಗಾಂಜಾ, 3 ಮೊಬೈಲ್ ಫೋನ್‌ಗಳು, ಸಾಗಾಟಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು 13,86,500 ರೂ. ಮೊತ್ತದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಜ.3ರಂದು ಸುರತ್ಕಲ್‌ ಚೊಕ್ಕಬೆಟ್ಟು ಸಮೀಪ ಮಾರಾಟ ಮಾಡುವ ಸಲುವಾಗಿ ಗಾಂಜಾ ಶೇಖರಿಸಿಟ್ಟಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಒರಿಸ್ಸಾದಿಂದ ಡಿ.29ರಂದು ಗಾಂಜಾ ತಂದು ಚೊಕ್ಕಬೆಟ್ಟುವಿನ ಮನೆಯಲ್ಲಿ ಶೇಖರಿಸಿಟ್ಟಿದ್ದರು. ಪೊಲೀಸ್ ಬಂದೋಬಸ್ತ್ ಹೆಚ್ಚಾಗಿದ್ದ ಕಾರಣ ಮಾರಾಟ ಮಾಡಲಾಗದೇ ಅದನ್ನು ಕಾರಿನಲ್ಲೇ ಇಟ್ಟಿರುವುದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ: 8(C), 20(b)(ii),(C) ಎನ್‌ ಡಿಪಿಎಸ್‌ ಕಾಯ್ದೆಯಂತೆ ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪ್ರದೀಪ್ ಪೂಜಾರಿ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎರಡು, ಬರ್ಕೆ, ಬೆಳ್ತಂಗಡಿ, ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲಿ ತಲಾ‌ ಒಂದು ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀಕಾಂತ.ಕೆ. ಅವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎ.ಎಸ್.ಐ ಚಂದ್ರಶೇಖರ್, ಎಚ್.ಸಿ ಗಳಾದ ರೆಜಿ.ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನೀಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪಿ.ಐ. ಪ್ರಮೋದ್ ಕುಮಾರ್, ಪಿ.ಎಸ್.ಐ ರಘುನಾಯ್ಕ್ ಮತ್ತು ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article