ED, CBI 'ಬಿಜೆಪಿಯ ರಾಜಕೀಯ ಸಾಧನಗಳಾಗಿ' ಕಾರ್ಯನಿರ್ವಹಿಸುತ್ತಿವೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳಗಳು (ಸಿಬಿಐ) 'ಬಿಜೆಪಿಯ ರಾಜಕೀಯ ಸಾಧನಗಳಾಗಿ' ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಆರೋಪಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖರ್ಗೆ, ಬಿಟ್‌ಕಾಯಿನ್‌ ಅಕ್ರಮ ವಹಿವಾಟು ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಉರುಫ್‌ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಸಂಬಂಧ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಮತ್ತು ಅವರ ಇಬ್ಬರು ಪುತ್ರರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಶೋಧಗಳನ್ನು ಖಂಡಿಸಿದರು ಮತ್ತು ದಾಳಿಗಳಿಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

'ಐಟಿ, ಇ.ಡಿ ಮತ್ತು ಸಿಬಿಐ ಬಿಜೆಪಿಗೆ ರಾಜಕೀಯ ಸಾಧನಗಳಲ್ಲದೆ ಬೇರೇನೂ ಅಲ್ಲ. ಅವರು ಇಷ್ಟು ದಿನ ಏನು ಮಾಡುತ್ತಿದ್ದರು? ಈಗ ಏಕೆ ದಾಳಿ ನಡೆಸಲಾಗುತ್ತಿದೆ ಎಂಬುದು ನಮಗೆ ತಿಳಿದಿಲ್ಲ. ಇ.ಡಿ ಆರೋಪಪಟ್ಟಿ ಸಲ್ಲಿಸಲಿ, ಆಗ ಅವರ ಮೇಲೆ ಏಕೆ ದಾಳಿ ನಡೆಸಲಾಗುತ್ತಿದೆ ಎಂದು ನಮಗೆ ತಿಳಿಯುತ್ತದೆ. ಇ.ಡಿ ನೀಡುವ ಶಿಕ್ಷೆಯ ಪ್ರಮಾಣ ಕೇವಲ ಶೇ 2 ರಷ್ಟಿದೆ. ಆದರೆ, ಅವರ ಬಿಜೆಪಿ ಆಡಳಿತದ ಕೈಗೊಂಬೆಗಳು' ಎಂದು ಅವರು ಹೇಳಿದರು.

ಹಾವೇರಿಯಲ್ಲಿ ದುಷ್ಕರ್ಮಿಗಳು ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ ಘಟನೆ ಬಗ್ಗೆ ಮಾತನಾಡಿದ ಖರ್ಗೆ, 'ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕನ್ನು ಯಾರೂ ಯಾರಿಗೂ ಕೊಟ್ಟಿಲ್ಲ. ಪ್ರಕರಣದ ಸತ್ಯಾಸತ್ಯತೆ ನನಗೆ ತಿಳಿದಿಲ್ಲ, ಆದರೆ ಇದನ್ನು ದುರುದ್ದೇಶದಿಂದ ಮಾಡಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್‌ಎ ಹ್ಯಾರಿಸ್ ಅವರ ಪುತ್ರರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತು ಒಮರ್ ಫಾರೂಕ್ ನಲಪಾಡ್ ಅವರ ನಿವಾಸಗಳು ಸೇರಿದಂತೆ ಒಟ್ಟು 17 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.