ಮೋದಿ– ಶಾರ ಸರ್ವಾಧಿಕಾರಕ್ಕೆ ಹೆದರಲ್ಲ; ನೂರು ಬಾರಿ ಜೈಲಿಗೆ ಹಾಕಿದರೂ ಹೋರಾಟ ನಿಲ್ಲಿಸಲ್ಲ: ಅಭಿಜೀತ್ ದೀಪ್ಕೆ ಎಚ್ಚರಿಕೆ

'ನನ್ನನ್ನು ಬಂಧಿಸಿದ ಪೊಲೀಸರು ಸಮವಸ್ತ್ರ ಧರಿಸಿರುವ ಗೂಂಡಾಗಳು; ಅಮಿತ್‌ ಶಾ ಅವರು ಪೊಲೀಸರನ್ನು ಗೂಂಡಾಗಳನ್ನಾಗಿ ಮಾಡಿದ್ದಾರೆ' 

ನವದೆಹಲಿ: ಅಜ್ಜಿ ನಿಧನರಾದ ಸುದ್ದಿ ತಿಳಿದ ಬಳಿಕವೂ ಮೊಬೈಲ್‌ ಕರೆ ಮಾಡಲು ಹಾಗೂ ವಕೀಲರನ್ನು ಸಂಪರ್ಕಿಸಲು ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ ಎಂದು ಸಿಜೆಪಿ (ಕಾಕ್‌ರೋಚ್ ಜನತಾ ಪಾರ್ಟಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಆರೋಪಿಸಿದ್ದಾರೆ.

“ನನ್ನನ್ನು ಬಂಧಿಸಿದ ಪೊಲೀಸರು ಸಮವಸ್ತ್ರ ಧರಿಸಿರುವ ಗೂಂಡಾಗಳು. ಅಮಿತ್‌ ಶಾ ಅವರು ಪೊಲೀಸರನ್ನು ಗೂಂಡಾಗಳನ್ನಾಗಿ ಮಾಡಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದವರೆಗೆ ಶಾಂತಿ ಕಾಪಾಡುವ ಷರತ್ತಿನ ಬಾಂಡ್ ಗೆ ನಾನು ಯಾವುದೇ ಸಹಿ ಹಾಕಿಲ್ಲ. ಮತ್ತೆ ನಾವು ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ. ಮೋದಿ-ಅಮಿತ್ ಶಾನಂತ ಜನರಿಗೆ ನಾವು ಹೆದರುವ ಮಾತೆ ಇಲ್ಲ. ಒಂದಲ್ಲ, ನೂರು ಬಾರಿ ಜೈಲಿಗೆ ಹಾಕಿದರೂ ನಾವು ಹೋgರಾಟದಿಂದ ಹಿಂದೆ ಸರಿಯಲ್ಲ. ನಿಮ್ಮ ಸರ್ವಾಧಿಕಾರ ಆಡಳಿತಕ್ಕೆ ನಾವು ಹೆದರಲ್ಲ, ಅಂತ್ಯ ಮಾಡಿಯೇ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. 

ಅಜ್ಜಿಯ ಸಾವಿನ ಸುದ್ದಿ ತಿಳಿಸಿದ ಬಳಿಕ ಮನೆಗೆ ತೆರಳುವ ಪೊಲೀಸರ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ ಎಂಬ ಪೊಲೀಸ್ ವೀಡಿಯೊಗೆ ಪ್ರತಿಕ್ರಿಯಿಸಿ ಈ ಆರೋಪ ಮಾಡಿದ್ದಾರೆ.

ತಮ್ಮ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಸೋದರ ಸಂಬಂಧಿಯ ದೂರವಾಣಿ ಸಂಖ್ಯೆಯನ್ನು ಪಡೆದು ಆಕೆಯೊಂದಿಗೆ ಮಾತನಾಡಲು ಮೊಬೈಲ್ ಬಳಸಲು ಅನುಮತಿ ಕೇಳಿದ್ದೆ. ಆದರೆ, ಅದಕ್ಕೂ ಅವಕಾಶ ನೀಡಲಿಲ್ಲ. ವಕೀಲರೊಂದಿಗೆ ಮಾತನಾಡಲು ಮಾಡಿದ ಮನವಿಯನ್ನೂ ನಿರಾಕರಿಸಲಾಯಿತು ಎಂದು ದೀಪ್ಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ. 

ನಾನು ಪೋಲೀಸರ ವಶದಲ್ಲಿದ್ದೇನೆ ಎಂದು ತಿಳಿಸಲು ಬೆಳಗಿನ ಜಾವ 3.30ಕ್ಕೆ ತಂದೆಗೆ ಕರೆ ಮಾಡುವಂತೆ ಪೊಲೀಸರು ಸೂಚಿಸಿದ್ದರು. ಆದರೆ ನಾನು ಬಂಧನದಲ್ಲಿದ್ದೇನೆ, ಎಲ್ಲಿದ್ದೇನೆ ಎಂದು ಪೊಲೀಸರು ತಿಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. 

ಈಗಾಗಲೇ ತಾಯಿಯನ್ನು ಕಳೆದುಕೊಂಡಿರುವ ತಂದೆಗೆ ಮತ್ತೆ ಇಂತಹ ಆಘಾತ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ರವಿವಾರ ದೆಹಲಿ ಪೊಲೀಸರು ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಅಕ್ಟೋಬರ್ 10ರಂದು ವಶದಲ್ಲಿದ್ದಾಗ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದ ಪೊಲೀಸರು, ವಿಷಯವನ್ನು ಸೂಕ್ಷ್ಮವಾಗಿ ತಿಳಿಸಲಾಗಿತ್ತು ಮತ್ತು ಅಂತ್ಯಕ್ರಿಯೆಗಾಗಿ ಊರಿಗೆ ತೆರಳಲು ನೆರವು ನೀಡುವ ಪ್ರಸ್ತಾಪವನ್ನೂ ಮಾಡಲಾಗಿತ್ತು. ಆದರೆ, ಅವರು ಅದನ್ನು ನಿರಾಕರಿಸಿದ್ದರು ಎಂದು ತಿಳಿಸಿದ್ದಾರೆ.

ಅಜ್ಜಿಯ ಸಾವಿನ ವಿಷಯವನ್ನು ಪೊಲೀಸರೇ ತಿಳಿಸಿಲ್ಲ ಎಂದು ಸಿಜೆಪಿ ಆರೋಪಿಸಿತ್ತು. ದೀಪ್ಕೆ ಅವರ ತಾಯಿಯೂ ಪೊಲೀಸರ ವಿರುದ್ಧ ಅಸತ್ಯದ ಆರೋಪ ಮಾಡಿದ್ದರೆ, ಸಿಜೆಪಿ ನಾಯಕ ಅಶುತೋಷ್ ರಾಂಕಾ ಮಾಹಿತಿ ನೀಡುವಾಗ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದರು.

ಜಂತರ್ ಮಂತರ್‌ನಲ್ಲಿ ಉದ್ದೇಶಿತ ಪ್ರತಿಭಟನೆಗೂ ಮುನ್ನ ಶನಿವಾರ ವಿಮಾನದೊಳಗಿನಿಂದ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದ ಮೂವರು ಸಿಜೆಪಿ ನಾಯಕರಲ್ಲಿ ದೀಪ್ಕೆ ಕೂಡ ಒಬ್ಬರು. ಪ್ರತಿಭಟನೆಗೆ ಅನುಮತಿ ನಿರಾಕರಿಸಲಾಗಿತ್ತು. ಬಳಿಕ ದೀಪ್ಕೆ, ರಾಂಕಾ ಮತ್ತು ಸೌರವ್ ದಾಸ್ ಅವರನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ ಭಾನುವಾರ ಬೆಳಗ್ಗೆ ಬಿಡುಗಡೆ ಮಾಡಲಾಯಿತು.