ಟೈಮ್ಸ್ ನೌ, ಟುಡೇಸ್ ಚಾಣಕ್ಯ, ಇಂಡಿಯಾ ಟುಡೆ ಸಮೀಕ್ಷೆ: ಕಾಂಗ್ರೆಸ್'ಗೆ ಸ್ಪಷ್ಟಬಹುಮತ: ಎಷ್ಟು ಸ್ಥಾನ ಸಿಗಲಿದೆ ನೋಡಿ...
ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿಯ ವಿಧಾನ ಸಭಾ ಚುನಾವಣೆಯ ಮತದಾನ ನಡೆದಿದ್ದು, ಚುನಾವಣೋತ್ತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಈ ಬಾರಿ ಮತದಾರ ಸ್ಪಷ್ಟವಾಗಿ ಕಾಂಗ್ರೆಸ್ ಕೈ ಹಿಡಿದಿದ್ದು, ಬಹುಮತ ನಿಚ್ಚಳ ಎಂದು ಹೇಳಿದೆ.
ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಅದೂ ಸರಿಯಾಗಿ ಮ್ಯಾಜಿಕ್ ಸಂಖ್ಯೆಯನ್ನು ತಲುಪುವ ಮೂಲಕ ಎಂದು ಸಮೀಕ್ಷೆ ಹೇಳಿದೆ.
ಟೈಮ್ಸ್ ನೌ- ಇಟಿಕ್ಯೂ ಜಂಟಿಯಾಗಿ ನಡೆಸಿರುವ ಮತಗಟ್ಟೆ ಸಮೀಕ್ಷೆ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ 113 ಸೀಟುಗಳನ್ನು ಪಡೆದುಕೊಂಡು ಸರ್ಕಾರ ರಚಿಸಲಿದೆ. 224 ಸೀಟುಗಳ ರಾಜ್ಯ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಸರ್ಕಾರ ರಚಿಸಬೇಕು ಎಂದರೆ ಅದು ಕನಿಷ್ಠ 113 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಸೀಟುಗಳ ಸಂಖ್ಯೆ 85ಕ್ಕೆ ಕುಸಿಯಲಿದೆ. ಜೆಡಿಎಸ್ ಕೂಡ ತನ್ನ ಸೀಟುಗಳನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ. ಟೈಮ್ಸ್ ನೌ ಪ್ರಕಾರ ಜೆಡಿಎಸ್ ಈ ಬಾರಿ ಕೇವಲ 23 ಸೀಟುಗಳನ್ನು ಪಡೆಯಲಿದೆ. ಇನ್ನು ಇತರರು 3 ಸ್ಥಾನಗಳಲ್ಲಿ ಗೆಲುವು ಕಾಣಲಿದ್ದಾರೆ.
ಅದೇ ರೀತಿ ಟುಡೇಸ್ ಚಾಣಕ್ಯ ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಾಧ್ಯತೆ ಇದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ 120 ಸ್ಥಾನ, ಬಿಜೆಪಿಗೆ 92 ಸ್ಥಾನ, ಜೆಡಿಎಸ್‌ಗೆ 12 ಮತ್ತು ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ.
ಇಂಡಿಯಾಟುಡೆ-ಏಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಟವಾಗಿದೆ. ಸಮೀಕ್ಷೆಯಂತೆ ಕಾಂಗ್ರೆಸ್‌ಗೆ ಅಭೂತಪೂರ್ವ ಬಹುಮತ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ 122-140 ಸ್ಥಾನ, ಬಿಜೆಪಿಗೆ 62-80 ಸ್ಥಾನ, ಜೆಡಿಎಸ್ 20-25, ಇತರರಿಗೆ 0-3 ಸ್ಥಾನ ಸಾಧ್ಯತೆ ಇದೆ.