ಮಹಾಮಳೆಗೆ ತತ್ತರಿಸಿದ ದುಬೈ; ಒಂದೇ ದಿನ ಸುರಿದ 2 ವರ್ಷಗಳಿಗಾಗುವಷ್ಟು ಮಳೆ! ಮರುಭೂಮಿಯಲ್ಲಿ ಮಹಾಮಳೆಗೆ ಕಾರಣವೇನು...? ಗಲ್ಫಿನಲ್ಲಿ ಇಷ್ಟೊಂದು ಮಳೆ ಸುರಿಯುತ್ತಿರುವ ಬಗ್ಗೆ ವಿಜ್ಞಾನಿಗಳು ಏನನ್ನುತ್ತಾರೆ ನೋಡಿ...
ದುಬೈ: ಕನಸಿನ ನಗರಿ ದುಬೈಯಲ್ಲಿ ಸುರಿದ ಭಾರೀ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದ್ದು, 2 ವರ್ಷಗಳಿಗಾಗುವಷ್ಟು ಮಳೆ ಒಂದೇ ದಿನ ಸುರಿದಿದೆ. ಇದು ಇಲ್ಲಿನ ಜನರನ್ನು ಕಂಗೆಡಿಸಿದೆ.
ದುಬೈ ಹೇಳಿಕೇಳಿ ಮರುಭೂಮಿಯಿಂದ ಕೂಡಿದ ದೇಶ. ದುಬೈ ಮಾತ್ರವಲ್ಲದೇ ಯುಎಇಯ ಎಲ್ಲ ಎಮಿರೇಟ್ಸ್ ಸೇರಿದಂತೆ ಮಧ್ಯಪ್ರಾಚ್ಯ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ವರ್ಷವಿಡೀ ಒಣಹವೆ ಇರುತ್ತದೆ. ವರ್ಷವೊಂದರಲ್ಲಿ ತೀರಾ ಕಡಿಮೆ ಎನ್ನುವಷ್ಟು ಮಳೆಯಾಗುತ್ತದೆ. ಆದರ ಇದಕ್ಕೆ ಅಪವಾದ ಎಂಬಂತೆ ಹಲವು ವರ್ಷಗಳಿಗೆ ಆಗುವಷ್ಟು ಮಳೆ ಒಮ್ಮೆಲೆ ನೆಲವೇ ಕೊಚ್ಚಿಹೋಗುವಷ್ಟು ಮಳೆ ಸುರಿದಿದೆ.
ಒಂದೆರಡು ವರ್ಷಗಳಲ್ಲಿ ಆಗುವಷ್ಟು ಮಳೆ ಒಂದೇ ದಿನದಲ್ಲಿ ಸುರಿದಿದೆ. ದುಬೈ ಮಾತ್ರವಲ್ಲ ಪಕ್ಕದ ಸೌದಿ ಅರೇಬಿಯಾ, ಒಮಾನ್, ಯೆಮನ್, ಕುವೈತ್, ಜೋರ್ಡನ್‌ನಲ್ಲೂ ಒಂದು ವಾರದಿಂದೀಚಿಗೆ ಇಂಥದ್ದೇ ಮಳೆ ಸುರಿಯುತ್ತಿದೆ. ಈ ಹಿಂದೆಯೂ ಇಂಥ ಮಳೆಯಾಗಿದ್ದರೂ ಈಗ ಸುರಿಯುತ್ತಿರುವ ಮಳೆಯ ಪ್ರಮಾಣ ವಿಪರೀತ ಎನಿಸುವಷ್ಟು ಇದೆ.
ಇಲ್ಲಿನ ಮಳೆಯ ಇತಿಹಾಸ ನೋಡುವುದಾದರೆ...
1975ರ ಫೆಬ್ರುವರಿ 16–17ರ ಮಧ್ಯರಾತ್ರಿಯಲ್ಲಿ ಸೌದಿ ಅರೇಬಿಯಾದ ಪೂರ್ವ ಭಾಗದಲ್ಲಿ ಮತ್ತು ಜೋರ್ಡನ್‌ನ ಭಾಗದಲ್ಲಿ ಕೆಲವೇ ಗಂಟೆಗಳಲ್ಲಿ 10 ಸೆಂಟಿಮೀಟರ್‌ಗಿಂತಲೂ ಹೆಚ್ಚು ಮಳೆ ಸುರಿದು, ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. 1977ರಲ್ಲಿ ಮತ್ತು 1981ರಲ್ಲಿ ಅಂಥದ್ದೇ ಮಳೆ ಮರುಕಳಿಸಿತ್ತು. ಮಧ್ಯಪ್ರಾಚ್ಯದ ದೇಶಗಳಲ್ಲಿ ಮಳೆಮಾಪನ ಆರಂಭವಾಗಿದ್ದು 1949ರಲ್ಲಿ. 1975, 1977 ಮತ್ತು 1981ರಲ್ಲಿ ಸುರಿದ ವಿಪರೀತ ಮಳೆಯು 1949ರಿಂದ ಆವರೆಗೆ ಸುರಿದ ಅತಿಹೆಚ್ಚಿನ ಮಳೆಯಾಗಿತ್ತು.
ಈ ಮೂರು ತಿಂಗಳಲ್ಲಿ ಮಳೆ...
ಈ ಎಲ್ಲ ಮರಳುಗಾಡು ರಾಷ್ಟ್ರಗಳಲ್ಲಿ ಮಳೆಗಳು ಫೆಬ್ರುವರಿ–ಮಾರ್ಚ್–ಏಪ್ರಿಲ್ ಅವಧಿಯಲ್ಲಿ ಸಂಭವಿಸಿದ್ದವು. ಆ ರೀತಿಯ ಮಳೆ ಆಗುವುದು ಏಕೆ ಎಂಬುದನ್ನು ಕಂಡುಕೊಳ್ಳುವ ಯತ್ನ ಕೂಡ ಈ ಹಿಂದೆ ಸಾಕಷ್ಟು ಬಾರಿ ನಡೆದಿತ್ತು. ಕೊನೆಗೂ ವಿಜ್ಞಾನಿಗಳು ಈ ಮಳೆ ವಿಪರೀತಕ್ಕೆ ಸತತ ಅಧ್ಯಯನಗಳ ಮೂಲಕ 1985ರಲ್ಲಿ ಕಾರಣ ಕಂಡುಕೊಂಡಿದ್ದಾರೆ.
ದುಬೈ ಪ್ರವಾಹಕ್ಕೆ ಮೋಡಬಿತ್ತನೆಯೇ ಕಾರಣವೇ...?
ಈ ಮಹಾಮಳೆಗೆ ಮೋಡ ಬಿತ್ತನೆ ಕಾರ್ಯವೇ ಕಾರಣ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ಸುದ್ದಿ ಸಂಸ್ಥೆಗಳೂ ಮೋಡ ಬಿತ್ತನೆಯೇ ಕಾರಣ ಎಂದು ಅಂದಾಜಿಸಿ ವರದಿ ಮಾಡಿವೆ. ಆದರೆ, ಮೋಡ ಬಿತ್ತನೆ ಕುರಿತು ಕೆಲಸ ಮಾಡುತ್ತಿರುವವರು, ವಿಜ್ಞಾನಿಗಳು ಈ ವಾದವನ್ನು ಅಲ್ಲಗಳೆದಿದ್ದಾರೆ. ಯುಎಇನ ಹವಾಮಾನ ಇಲಾಖೆಯೇ ಹೇಳುವಂತೆ ಮೋಡ ಬಿತ್ತನೆ ಕಾರ್ಯದಿಂದ ಮಳೆ ಬರುತ್ತದೆ ನಿಜ. ಆದರೆ, ಕರಾರುವಕ್ಕಾಗಿ ಇಷ್ಟೇ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂಬುದಕ್ಕೆ ಈವರೆಗೂ ಉತ್ತರ ದೊರೆತಿಲ್ಲ. ಮೋಡ ಬಿತ್ತನೆಯಿಂದ ಮಳೆ ಪ್ರಮಾಣದಲ್ಲಿ ಶೇ 10ರಿಂದ ಶೇ 30ರಷ್ಟಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ಗಲ್ಫಿನಲ್ಲಿ ಮಹಾಮಳೆಗೆ ಕಾರಣವೇನು?
ವಿಜ್ಞಾನಿಗಳ ಪ್ರಕಾರ ಅರಬ್ ರಾಷ್ಟ್ರಗಳಲ್ಲಿನ ಮಹಾಮಳೆಗೆ 3 ಕಾರಣಗಳನ್ನು ವಿವರಿಸಲಾಗಿದೆ. ಏಷ್ಯಾದತ್ತ ಬೀಸುವ ಹವಾ ಮಾರುತಗಳು (ಜೆಟ್ ಸ್ಟ್ರೀಂ), ಶೀತಮಾರುತಗಳು ಮತ್ತು ಜಾಗತಿಕ ತಾಪಮಾನ ಏರಿಕೆಯಂತಹ ಕಾರಣಗಳಿಂದಾಗಿ ಮಹಾಮಳೆಯಾಗುತ್ತದೆ ಎನ್ನಲಾಗಿದೆ.
ವಿಜ್ಞಾನಿಗಳು ಹೇಳುವುದೇನು...?
ಆಫ್ರಿಕಾದ ಈಶಾನ್ಯ ಭಾಗದಿಂದ ಅರೇಬಿಯಾ ಉಪಕಂಡ ಮತ್ತು ಪಶ್ಚಿಮ ಏಷ್ಯಾದತ್ತ ಹವಾ ಮಾರುತಗಳು (ಜೆಟ್ ಸ್ಟ್ರೀಂ) ಬೀಸುತ್ತವೆ. ಸಾಮಾನ್ಯವಾಗಿ ಈ ಹವಾ ಮಾರುತಗಳು ಅಕ್ಟೋಬರ್‌ನಿಂದ ಜೂನ್‌ವರೆಗೆ ಹೆಚ್ಚು ಸಕ್ರಿಯವಾಗಿರುತ್ತವೆ. ಮಧ್ಯಪ್ರಾಚ್ಯದ ದೇಶಗಳಿಗೆ ವರ್ಷದಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಮಳೆ ತರುವುದೂ ಈ ಹವಾ ಮಾರುತಗಳೇ. ಆದರೆ ಭೂಮಿಯ ಮೇಲ್ಮನಲ್ಲಿ ಹವಾಮಾನ ಬದಲಾಗುವ ಕಾರಣದಿಂದ ಈ ಹವಾ ಮಾರುತಗಳು ಆಗೊಮ್ಮೆ–ಈಗೊಮ್ಮೆ ವಿಪರೀತ ಮಳೆ ಸುರಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ವಾತಾವರಣ ಬದಲಾವಣೆಗೆ ಕಾರಣ ?
ಸ್ವಲ್ಪ ಪ್ರಮಾಣದ ತೇವಾಂಶದಿಂದ ಕೂಡಿರುವ ಈ ಹವಾ ಮಾರುತಗಳು ಹೊರ್ಮುಜ್ ಕೊಲ್ಲಿ ದಾಟುವಾಗ, ಇನ್ನಷ್ಟು ಆವಿಯನ್ನು ಕ್ರೋಡೀಕರಿಸಿಕೊಳ್ಳುತ್ತವೆ. ಅರೇಬಿಯಾ ಉಪಖಂಡವನ್ನು ಮುಟ್ಟುವಾಗ ಅಲ್ಪ ಪ್ರಮಾಣದ ಮಳೆ ತರುತ್ತವೆ. ಆದರೆ ಅರೇಬಿಯಾ ಉಪಖಂಡದ ಮೇಲೆ ಉಷ್ಣಾಂಶ ಹೆಚ್ಚಾಗಿದ್ದರೆ ಈ ಆವಿಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತದೆ. ಅತಿಉಷ್ಣಾಂಶದ ಕಾರಣದಿಂದ ಅದೇ ಸಂದರ್ಭದಲ್ಲಿ ಅರಬ್ಬಿ ಸಮುದ್ರದ ವಾಯವ್ಯ ಭಾಗದಲ್ಲಿ (ಯೆಮನ್ ಮತ್ತು ಒಮಾನ್ ಕರಾವಳಿ ಬಳಿ) ವಾಯುಭಾರ ಕುಸಿದಿರುತ್ತದೆ. ಇದು ಸಹ ವಾತಾವರಣದಲ್ಲಿ ನೀರಾವಿಯ ಪ್ರಮಾಣವನ್ನು ಉಂಟು ಮಾಡುತ್ತದೆ. ಜತೆಗೆ ದಟ್ಟ ಮೋಡಗಳನ್ನು ಸೃಷ್ಟಿಸುತ್ತದೆ.
ಶೀತಮಾರುತಗಳ ಸಾಥ್....
ಇವಿಷ್ಟೇ ಸಂಭವಿಸಿದರೆ ಅತಿಮಳೆಯಾಗುವುದಿಲ್ಲ. ಜತೆಗೆ ಉತ್ತರ ಧ್ರುವದಿಂದ ದಕ್ಷಿಣ ಭಾಗಕ್ಕೆ ಬೀಸುವ ಶೀತ ಮಾರುತಗಳೂ ಮಧ್ಯಪ್ರಾಚ್ಯವನ್ನು ತಲುಪಬೇಕು. ಹೀಗೆ ಪೂರ್ವದಿಂದ ಬರುವ ಹವಾ ಮಾರುತ, ಅರಬ್ಬಿ ಸಮುದ್ರದಿಂದ ವಾಯವ್ಯ ದಿಕ್ಕಿಗೆ ಚಲಿಸುವ ವಾಯುಭಾರ ಕುಸಿತದ ಸ್ಥಿತಿ ಮತ್ತು ಉತ್ತರದಿಂದ ದಕ್ಷಿಣದತ್ತ ಬೀಸುವ ಶೀತ ಮಾರುತ, ಈ ಮೂರೂ ಮಧ್ಯಪ್ರಾಚ್ಯದಲ್ಲಿ ಒಗ್ಗೂಡಬೇಕು. ಅವು ಪರಸ್ಪರ ಸಂಘರ್ಷಕ್ಕೆ ಈಡಾದಾಗ ಅಲ್ಲಿನ ನೀರಾವಿಯ ಸಾಂದ್ರತೆ ಹೆಚ್ಚಾಗುತ್ತದೆ, ಅಪಾರವಾದ ಮಳೆ ಸುರಿಯುತ್ತದೆ. ಒಂದಿಡೀ ವರ್ಷದಲ್ಲಿ ಸುರಿಯಬೇಕಾದಷ್ಟು ಮಳೆ ಕೆಲವೇ ಗಂಟೆಗಳಲ್ಲಿ ಸುರಿದು ಬಿಡುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.
ಮಳೆಯ ತೀವ್ರತೆ ಹೆಚ್ಚುತ್ತಲೇ ಇದೆ....
ಯುಎಇಯಲ್ಲಿ ಮಂಗಳವಾರ ಸುರಿದ ಮತ್ತು ಅಕ್ಕಪಕ್ಕದ ದೇಶಗಳಲ್ಲಿ ವಾರದಿಂದ ಸುರಿಯುತ್ತಿರುವ ಮಳೆಗೂ ಇಂಥದ್ದೇ ಹವಾಮಾನ ವಿದ್ಯಮಾನವೇ ಕಾರಣ ಎಂದು ಯುಎಇ ಮತ್ತು ಅಮೆರಿಕದ ಹವಾಮಾನ ಇಲಾಖೆಗಳ ವಿಜ್ಞಾನಿಗಳು ಹೇಳಿದ್ದಾರೆ. 2022ರಲ್ಲಿ, 2023ರಲ್ಲಿ ಮತ್ತು ಈಗ 2024ರಲ್ಲೂ ಇಂಥ ಮಳೆ ಸುರಿದಿದೆ. ವರ್ಷದಿಂದ ವರ್ಷಕ್ಕೆ ಇಂತಹ ಮಳೆಯ ತೀವ್ರತೆ ಹೆಚ್ಚಾಗುತ್ತಲೇ ಇದೆ. ಹೀಗೆ ಇಂತಹ ಮಳೆಯ ತೀವ್ರತೆ ಹೆಚ್ಚಾಗಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯೇ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪ್ರವಾಹಕ್ಕೆ ಒಳಚರಂಡಿ ವ್ಯವಸ್ಥೆ ಕೊರತೆ ಕಾರಣ...
ಇನ್ನು ಮಳೆಯನ್ನೇ ಕಾಣದ ಅರಬ್ ರಾಷ್ಟ್ರಗಳು ತಮ್ಮ ಒಳಚರಂಡಿ ವ್ಯವಸ್ಥೆಯನ್ನು ಮಹಾಮಳೆಗೆ ಹೊಂದಿಕೊಂಡಂತೆ ವಿನ್ಯಾಸಗೊಳಿಸಿಕೊಂಡಿಲ್ಲ. ಮಹಾಮಳೆ ಸುರಿದಾಗ ಒಳಚರಂಡಿ ತುಂಬಿ ನೀರು ಮೇಲೆ ಹರಿಯಲಾರಂಭಿಸಿದೆ. ಇದೂ ಕೂಡ ದುಬೈ ಪ್ರವಾಹಕ್ಕೆ ಕಾರಣ ಎಂದು ಹೇಳಲಾಗಿದೆ.