ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ ನಟ ದರ್ಶನ್! ಮಂಡ್ಯ ಅಖಾಡದಲ್ಲಿ ಕಾಣಿಸಿಕೊಳ್ಳದ ಸುಮಲತಾ ಮೌನಕ್ಕೆ ಶರಣು

ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ ನಟ ದರ್ಶನ್! ಮಂಡ್ಯ ಅಖಾಡದಲ್ಲಿ ಕಾಣಿಸಿಕೊಳ್ಳದ ಸುಮಲತಾ ಮೌನಕ್ಕೆ ಶರಣು

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭಾ ಅಖಾಡದಲ್ಲೂ ಮಂಡ್ಯದಲ್ಲಿ ದಳಪತಿಗಳನ್ನು ಕಟ್ಟಿ ಹಾಕಬೇಕೆಂದು ಕಾಂಗ್ರೆಸ್ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. 

ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪರ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ, ಅಂದು ಮಗನ ವಿರುದ್ಧ ಪ್ರಚಾರ ಮಾಡಿ ಸುಮಲತಾ ರನ್ನು ಗೆಲ್ಲಿಸಿಕೊಂಡಿದ್ದ ದರ್ಶನ್‌, ಇಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಚಾರಕ್ಕೆ ಇಳಿದಿದ್ದಾರೆ. ಮಂಡ್ಯದಲ್ಲಿ ದರ್ಶನ್‌‌ ಬೆಂಬಲಿಸುವ ದೊಡ್ಡ ಒಕ್ಕಲಿಗರ ಪಡೆಯಿದ್ದು, ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ದರ್ಶನ್‌ ಫ್ಯಾನ್ಸ್‌‌ ಇದ್ದಾರೆ. ಅಭಿಮಾನಿಗಳ ವೋಟ್‌ ಕಾಂಗ್ರೆಸ್‌ಗೆ ಬಂದರೆ ಶಕ್ತಿ ದುಪ್ಪಟ್ಟಾಗಲಿದೆ. ಸದ್ಯ ಹದಿನೈದು ದಿಗಳಿಂದ ಸ್ಟಾರ್‌‌ ಚಂದ್ರು ಕ್ಷೇತ್ರದಲ್ಲಿ ಬೀಡು ಬಿಟ್ಟು ನಿರಂತರ ಪ್ರಚಾರದಲ್ಲಿದ್ದಾರೆ.

ಹುಸ್ಕೂರು ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ರೋಡ್ ಶೋ ನಡೆಸಿದರು. ನಟ ದರ್ಶನ್ ನೋಡಲು ಮಂಡ್ಯದಲ್ಲಿ ಜನರು ಮುಗಿಬಿದ್ದಿದ್ದು, ಅಭಿಮಾನಿಗಳು ಶಿಳ್ಳೆ, ಚಪ್ಪಾಳೆ ಹಾಕಿದ್ದಾರೆ. ರೋಡ್‌ ಶೋ ಉದ್ದಕ್ಕೂ ಬಿಲ್ಡಿಂಗ್‌ಗಳ ಮೇಲೆ ಮಹಿಳೆಯರು ನಿಂತಿದ್ದ ದೃಶ್ಯ ಕಂಡು ಬಂದಿದೆ. ದರ್ಶನ್ ರೋಡ್ ಶೋಗೆ ಶಾಸಕ ನರೇಂದ್ರ ಸ್ವಾಮಿ, ಕದಲೂರು ಉದಯ್ ಸಾಥ್ ನೀಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ನಡೆಸಿದ ನಟ ದರ್ಶನ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ನಾನು ಮೊದಲೇ ಹೇಳಿ ಬಿಡ್ತೀನಿ. ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಬರಲ್ಲ, ಬರೋದು ಇಲ್ಲ. ನಾನು ಪ್ರಚಾರಕ್ಕೆ ಬರೋದು ಬರೀ ವ್ಯಕ್ತಿ ಪರ. ಇದೇ 5 ವರ್ಷದ ಕೆಳಗೆ ಶಾಸಕರಾದ ನರೇಂದ್ರಣ್ಣ ಅವರು ಮಾಡಿದಂತಹ ಸಹಾಯವನ್ನು ನೆನಪಿಸಿಕೊಳ್ಳುತ್ತೇವೆ. ಅವರ ಪ್ರೀತಿ, ಪ್ರೇಮ ಯಾವಾಗಲು ನೆನಪಿಸಿಕೊಳ್ಳುತ್ತೇವೆ. ಅವರ ಆಶೀರ್ವಾದವನ್ನು ಕೇಳಿ ಕೊಳ್ಳುತ್ತೇವೆ ಎಂದರು.

ಸುಮಮ್ಮ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿಲ್ಲ ಅಂದ್ರೆ ನಮಗೆ ಸಹಾಯ ಮಾಡಬೇಕು ಅಂತ ನರೇಂದ್ರ ಸ್ವಾಮಿ ಮೊದಲೇ ಕೇಳಿದ್ದರು. ಫಸ್ಟ್ ಬಂದವರಿಗೆ ಫಸ್ಟ್ ಆದ್ಯತೆ ನೀಡಿದ್ದೇನೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಅಮೂಲ್ಯವಾದ ಮತ ಹಾಕಿ ಎಂದು ದರ್ಶನ್ ಪ್ರೀತಿಯಿಂದ ಕೇಳಿ ಕೊಂಡಿದ್ದಾರೆ.

ಇನ್ನೂ ಬಿಜೆಪಿ ಸೇರ್ಪಡೆ ಆದ ಬಳಿಕವೂ ಸುಮಲತಾ ಮೌನ ವಹಿಸಿದ್ದು, ಮಂಡ್ಯದಲ್ಲಿ ಬಹಿರಂಗ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಎಚ್‌ಡಿಕೆ ಕಣದಲ್ಲಿದ್ದರೂ, ಮಂಡ್ಯ ಅಖಾಡದಲ್ಲಿ ಕಾಣಿಸಿಕೊಳ್ಳದ ಸುಮಲತಾ, ನನ್ನನ್ನು ಎಚ್‌ಡಿಕೆ ಅಹ್ವಾನಿಸಿಲ್ಲ ಎಂದಿದ್ದಾರೆ ಎಂದು ತಿಳಿದು ಬಂದಿದೆ. ತಮಗೆ ಬಿಜೆಪಿಯಿಂದಲೇ ಅಧಿಕೃತ ಅಹ್ವಾನ ಬರಬೇಕು ಎಂಬುದು ಸುಮಲತಾ ಅಭಿಪ್ರಾಯವಾಗಿದೆ. ದರ್ಶನ್‌ ಆಗಮನ, ಸುಮಲತಾ ಮೌನದಿಂದ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಡಬಲ್‌ ಟೆನ್ಷನ್‌‌ ಉಂಟಾಗಿದೆ. ಮಂಡ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿಗಿದೆ.

Ads on article

Advertise in articles 1

advertising articles 2

Advertise under the article