ಅಹಮದಾಬಾದ್: ವಿರಾಟ್ ಕೊಹ್ಲಿ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು IPL 2026ರ ಫೈನಲ್ನಲ್ಲಿ ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ.
ಬೌಲರ್‌ಗಳ ಶಿಸ್ತುಬದ್ಧ ಮಾರಕ ದಾಳಿ ಹಾಗೂ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇತಿಹಾಸ ನಿರ್ಮಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು ಧೂಳೀಪಟ ಮಾಡಿದ ಆರ್‌ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಗುರಿ ಬೆನ್ನಟ್ಟಿದ RCBಗೆ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಉತ್ತಮ ಆರಂಭ ಒದಗಿಸಿದರು. ಆಕ್ರಮಣಕಾರಿ ಆಟವಾಡಿದ ವೆಂಕಟೇಶ್ 16 ಎಸೆತಗಳಲ್ಲಿ 32 ರನ್ ಗಳಿಸಿದರು. ಇದೇ ವೇಳೆ ಕೊಹ್ಲಿ ತಮ್ಮ IPL ವೃತ್ತಿಜೀವನದ ವೇಗದ ಅರ್ಧಶತಕ ದಾಖಲಿಸಿ ತಂಡವನ್ನು ಮುನ್ನಡೆಸಿದರು.
ಆದರೆ, ರಶೀದ್ ಖಾನ್ ಒಂದೇ ಓವರ್ನಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಕಬಳಿಸುವ ಮೂಲಕ GTಗೆ ಪಂದ್ಯ ಗೆಲ್ಲುವ ಆಸೆ ಜೀವಂತವಾಗಿಸಿದರು. ಇದರಿಂದ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿತ್ತು.
ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಂತರ ಸತತ ಎರಡು ಬಾರಿ ಟ್ರೋಫಿ ಗೆದ್ದ ಮೂರನೇ ತಂಡ ಎಂಬ ಅಪ್ರತಿಮ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭಾಜನವಾಗಿದೆ. 5 ವಿಕೆಟ್‌ಗಳ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿಶ್ವದಾದ್ಯಂತ ಇರುವ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, “ಈ ಸಲವೂ ಕಪ್ ನಮ್ದೇ” ಎಂಬ ಘೋಷಣೆ ಎಲ್ಲೆಡೆ ಮೊಳಗುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ (GT), ಆರ್‌ಸಿಬಿ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ನಲುಗಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 155 ರನ್‌ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ಇನ್ನು 12 ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 161 ರನ್ ಹೊಡೆದು ಜಯಗಳಿಸಿತು.
ಆರ್‌ಸಿಬಿಯ ಈ ಐತಿಹಾಸಿಕ ಕಪ್ ಗೆಲುವಿನಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದರು. ವಿರಾಟ್ ಕೊಹ್ಲಿ ಆರಂಭಿಕ ಆಟಗಾರನಾಗಿ (Opener) ಕ್ರೀಸ್‌ಗಿಳಿದು ಜಿಟಿ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪಂದ್ಯದ ಮೊದಲ ಓವರ್‌ನಿಂದಲೇ ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದ ಕೊಹ್ಲಿ ಅಜೇಯ 75 ರನ್(42 ಎಸೆತ, 9 ಬೌಂಡರಿ, 3 ಸಿಕ್ಸ್) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.
