ಮಂಗಳೂರು: ಇಳಿವಯಸ್ಸಿನಲ್ಲಿಯೂ ತಮ್ಮ ಆಗಾಧ ಚಿಂತನೆಗಳ ಮೂಲಕ ಡಾ. ಕೆ.ವಿ. ದೇವಾಡಿಗರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಯುವ ಸಮುದಾಯ ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಬೆಳೆಯಬೇಕು ಎಂದು ದುಬೈ ಆಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ಟ್ರೇಡಿಂಗ್ ಲಿ. ಸಂಸ್ಥೆಯ ಆಡಳಿತ ನಿರ್ದೇಶಕರು, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ಶೇರಿಗಾರ್ ಕರೆ ನೀಡಿದ್ದಾರೆ.
ಡಾ. ಕೆ. ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಶತಮಾನೋತ್ಸವ ಸಂಭ್ರಮ ಆಚರಿಸುತ್ತಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು ಇವರ ಆಶ್ರಯದಲ್ಲಿ ಮಂಗಳೂರು ಎಂ.ಜಿ. ರಸ್ತೆಯಲ್ಲಿರುವ ಟಿ.ಎಮ್.ಎ. ಪೈ ಕನ್ವೆನ್‌ಷನ್ ಹಾಲ್‌ನಲ್ಲಿ ಸೆ.20 ರವಿವಾರ ನಡೆದ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ ದೇವಾಡಿಗ ಯುವ ಪ್ರತಿಭೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಟ್ರಸ್ಟ್‌ನ ಉಪಾಧ್ಯಕ್ಷೆ ಡಾ. ಭಾವನಾ ಶೇರಿಗಾರ್ ಮಾತನಾಡಿ, ಯುವ ಜನಾಂಗವು ದೊಡ್ಡ ಕನಸುಗಳೊಂದಿಗೆ ಹೆಚ್ಚಿನ ಸಾಧನೆ ಮಾಡುತ್ತಾ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ಸಾಧಕರಿಗೆ ಸನ್ಮಾನ: ವೈದ್ಯಕೀಯ ವಿಭಾಗದಲ್ಲಿ ಡಾ. ಕೆ. ವಿ. ದೇವಾಡಿಗ ಶ್ರೆಷ್ಟ ವೈದ್ಯಕೀಯ ಪದವಿ ವಿದ್ಯಾರ್ಥಿ-2026 ಪ್ರಶಸ್ತಿಗೆ ಡಾ. ಪ್ರಜ್ಞಾ, ಡಾ. ಅನ್ವಿತ್ ಬಿ., ಶಮಿತಾ ಬಿ. ದೇವಾಡಿಗ, ಹರ್ಷಿತ ಎಸ್., ಅಶ್ಮಿತಾ ಜಿ.ವಿ. ಅವರಿಗೆ ಡಾ. ಕೆ. ವಿ. ದೇವಾಡಿಗ ಶ್ರೇಷ್ಟ ಸ್ನಾತಕೋತ್ತರ ವಿದ್ಯಾರ್ಥಿ-2026 ಪ್ರೋತ್ಸಾಹದಾಯಕ ಪ್ರಶಸ್ತಿ, ಶ್ರೀ ಹರೀಶ್ ಶೇರಿಗಾರ್ ಶ್ರೇಷ್ಠ ಯುವ ಸಂಗೀತಗಾರ-2026 ಪ್ರಶಸ್ತಿಗೆ ಸುಮನ್ ಆರ್. ದೇವಾಡಿಗ, ಡಾ. ದಿವಾಕರ್ ರಾವ್ ಶ್ರೇಷ್ಠ ಯೋಗ ಶಿಕ್ಷಣ-2026 ಪ್ರಶಸ್ತಿಗೆ ಡಾ. ಗೋವಿಂದ ನಾಗಪ್ಪ ದೇವಾಡಿಗ, ಡಾ. ಭಾವನಾ ಶೇರಿಗಾರ್ ಶ್ರೇಷ್ಠ ಇಂಜಿನೀಯರಿಂಗ್ ಪದವಿ ವಿದ್ಯಾರ್ಥಿ-2026 ಪ್ರಶಸ್ತಿಗೆ ಅಂಕಿತಾ ಆರ್. ದೇವಾಡಿಗ, ಶ್ರೀ ಕೆ.ಜೆ. ದೇವಾಡಿಗ ಶ್ರೇಷ್ಠ ಯುವ ಕ್ರೀಡಾಪಟು ಪ್ರಶಸ್ತಿಗೆ ಸ್ವರ್ಣಾ, ಶ್ರೀ ಅಶೋಕ್ ಶ್ರೇಷ್ಠ ದಮಾಜ ಸೇವಕ ಪ್ರಶಸ್ತಿಗೆ ಶರತ್ ಕುಮಾರ್, ಡಾ. ದೇವರಾಜ್ ಕೆ. ಶ್ರೇಷ್ಠ ಶಿಕ್ಷಕಿ (ಫ್ರೌಢಶಾಲೆ) ಚಂದ್ರಲೇಖಾ,
ದಿವಂಗತ ಶ್ರೀ ಕೆ. ಲಕ್ಷ್ಮಣ್ ಸ್ಮರಣಾರ್ಥ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಟ ಅಂಕ ಪಡೆದ ಮಂಗಳಾ ಶಾಲೆ ವಿದ್ಯಾರ್ಥಿ-2026 ಅನಾಮಿಕಾ ಗುಪ್ತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಡಾ. ಕೆ. ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಡಾ.ಕೆ.ವಿ. ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಗಳಾದ ಡಾ. ದಿವಾಕರ್ ರಾವ್, ಕೆ.ಜೆ. ದೇವಾಡಿಗ, ಅಶೋಕ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಉಪಾಧ್ಯಕ್ಷ ಕರುಣಾಕರ ಎಂ.ಎಚ್., ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಶಿವಾನಂದ ಮೊಯಿಲಿ, ಡಾ. ಸುಂದರ್ ಮೊಯಿಲಿ, ಟ್ರಸ್ಟ್ ಕೋಶಾಧಿಕಾರಿ ಗೀತಾ ವಿ. ಕಲ್ಯಾಣಪುರ್ ಮೊದಲಾದವರಿದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಡಾ. ದೇವರಾಜ್ ಕೆ. ಸ್ವಾಗತಿಸಿದರು. ಪಲ್ಲವಿ ಪ್ರಾರ್ಥಿಸಿದರು. ಯಶ್ವಿತಾ ರೋಷನ್ ನಿರೂಪಿಸಿದರು. ಟ್ರಸ್ಟಿ ಅಶೋಕ್ ವಂದಿಸಿದರು.













