SIR ಬಗ್ಗೆ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯ; ಆಯೋಗ ನೀಡಿದ ಸ್ಪಷ್ಟನೆ ಏನು..?

ನವದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದಲೇ ಕೂಡಿವೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಈ ಮೂಲಕ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದೊಳಗೆ ಆಂತರಿಕ ಭಿನ್ನಮತ ಉಂಟಾಗಿದೆ ಎಂಬ ವರದಿಯನ್ನು ಚುನಾವಣಾ ಆಯೋಗ ಬುಧವಾರ ತಳ್ಳಿಹಾಕಿದೆ. ಎಸ್‌ಐಆರ್‌ ಸೇರಿದಂತೆ ಆಯೋಗ ಕೈಗೊಂಡಿರುವ ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದಲೇ ಕೂಡಿವೆ ಎಂದು‌ ಎಂದು ಸ್ಪಷ್ಟಪಡಿಸಿದೆ.

ಭಾರತೀಯ ಚುನಾವಣಾ ಆಯೋಗದ ಎಲ್ಲಾ ನಿರ್ಧಾರಗಳು, SIRಗೆ ಸಂಬಂಧಿಸಿದ ನಿರ್ಧಾರಗಳನ್ನೂ ಒಳಗೊಂಡಂತೆ, ಇಬ್ಬರು ಚುನಾವಣಾ ಆಯುಕ್ತರು ಹಾಗೂ ಮುಖ್ಯ ಚುನಾವಣಾ ಆಯುಕ್ತರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಮಾಧ್ಯಮ ವರದಿಯಲ್ಲಿ ಏನಿತ್ತು?

ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದೊಳಗೆ ಭಿನ್ನಾಭಿಪ್ರಾಯವಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. 2025ರ ನವೆಂಬರ್‌ ತಿಂಗಳಿನಿಂದ 2026ರ ಆಗಸ್ಟ್‌ ವರೆಗೆ ದಾಖಲಾದ ಲಿಖಿತ ಆಕ್ಷೇಪಣೆಗಳನ್ನ ಪರಿಶೀಲಿಸಿದ ನಂತರ ಈ ವರದಿ ಪ್ರಕಟಿಸಲಾಗಿದೆ ಎಂದು ಮಾಧ್ಯಮದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಆಕ್ಷೇಪಣೆಗಳು SIR ಪ್ರಕ್ರಿಯೆ ಮಾತ್ರವಲ್ಲದೆ, ಫಾರ್ಮ್-6ನಲ್ಲಿ ಬದಲಾವಣೆ, ಹೊಸ ಮತದಾರರ ಸೇರ್ಪಡೆ, ಮತದಾರರ ಹೆಸರುಗಳ ಅಳಿಸುವಿಕೆ, ಮತದಾರರ ಪಟ್ಟಿಗೆ ಸಂಬಂಧಿಸಿದ ಮೇಲ್ಮನವಿ ಹಾಗೂ ಚುನಾವಣಾ ಪಟ್ಟಿಯ ದತ್ತಾಂಶಕ್ಕೆ ಪ್ರವೇಶ ಸೇರಿದಂತೆ ಹಲವು ವಿಚಾರಗಳನ್ನು ಒಳಗೊಂಡಿದ್ದವು ಎಂದು ವರದಿ ತಿಳಿಸಿತ್ತು.

ಕೆಲವು ನಿರ್ಧಾರಗಳು ಮತ್ತು ಆದೇಶಗಳು ತಮ್ಮ ಗಮನಕ್ಕೆ ಬಾರದೇ ಹೊರಡಿಸಲಾಗುತ್ತಿದೆ ಎಂಬ ಪ್ರಶ್ನೆಯನ್ನೂ ಇಬ್ಬರು ಚುನಾವಣಾ ಆಯುಕ್ತರು ಎತ್ತಿದ್ದರು. ಈ ಆಕ್ಷೇಪಣೆಗಳನ್ನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಗಮನಕ್ಕೂ ತರಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿತ್ತು.

ಮಾಧ್ಯಮ ವರದಿ ಬೆನ್ನಲ್ಲೇ ಆಯೋಗದ ವಿರುದ್ಧ ಕೆಲ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳೂ ನಡೆದಿದ್ದವು. ಈ ಬೆನ್ನಲ್ಲೇ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ವಿಪಕ್ಷಗಳ ಆಗ್ರಹ

ಇನ್ನೂ ಮಾಧ್ಯಮ ವರದಿ ಹೊರಬಿದ್ದ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂಬ ಆಗ್ರಹವೂ ವಿಪಕ್ಷಗಳಿಂದ ಕೇಳಿಬಂದಿದೆ.

ಜ್ಞಾನೇಶ್ ಕುಮಾರ್ ಅವರು ತಮ್ಮ ಇಚ್ಛೆಯಂತೆ ಚುನಾವಣಾ ಆಯೋಗವನ್ನ ನಡೆಸುತ್ತಿದ್ದಾರೆ. ಮೂರು ಸದಸ್ಯರ ಚುನಾವಣಾ ಆಯೋಗದಲ್ಲಿ ಜ್ಞಾನೇಶ್ ಕುಮಾರ್ ಅವರ ಮಾತೇ ಅಂತಿಮವಾಗುತ್ತಿದೆ. ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡಕ್ಕೆ ಒಳಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಕಿಡಿ ಕಾರಿದೆ. ಅಲ್ಲದೇ ‘ವೋಟ್ ಕಳ್ಳತನ’ ಮತ್ತು ಚುನಾವಣಾ ಆಯೋಗದಲ್ಲಿ ರಾಜಕೀಯ ಹಸ್ತಕ್ಷೇಪದ ಕುರಿತು ಪಕ್ಷವು ಈ ಹಿಂದೆಯೂ ಮಾಡಿದ್ದ ಆರೋಪಗಳನ್ನು ಪುನರುಚ್ಚರಿಸಿದೆ. ಕಾಂಗ್ರೆಸ್‌ ಹೇಳಿಕೆಗೆ ಸಮಾಜವಾಧಿ ಪಕ್ಷ ಸೇರಿದಂತೆ ಇಂಡಿ ಒಕ್ಕೂಟದ ಅನೇಕ ಪಕ್ಷಗಳು ಸಹಮತ ವ್ಯಕ್ತಪಡಿಸಿವೆ.