ಉಡುಪಿ: ಜಿಲ್ಲೆಯ ಸಾರ್ವಜನಿಕ ರಸ್ತೆಗಳಲ್ಲಿ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ರಸ್ತೆ ಅಭಿವೃದ್ಧಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಘಾತ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚಿಸಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 3,785 ಸರಕು ಸಾಗಣೆ ವಾಹನಗಳ ಪೈಕಿ 1,952 ವಾಹನಗಳಿಗೆ ಮಾತ್ರ ವೇಗ ನಿಯಂತ್ರಕ ಅಳವಡಿಸಲಾಗಿದ್ದು, ಉಳಿದ ವಾಹನಗಳಿಗೂ ಒಂದು ತಿಂಗಳೊಳಗೆ ಅಳವಡಿಸಬೇಕು ಎಂದರು. ಓವರ್‌ಲೋಡ್ ವಿರುದ್ಧ ತೀವ್ರ ತಪಾಸಣೆ ನಡೆಸಬೇಕು. ಕಳೆದ ಮೂರು ತಿಂಗಳಲ್ಲಿ 1,569 ವಾಹನಗಳನ್ನು ತಪಾಸಣೆ ನಡೆಸಿ, 15 ಪ್ರಕರಣ ದಾಖಲಿಸಿ ₹3.33 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಉಡುಪಿ ನಗರದ ಪ್ರಮುಖ ಜಂಕ್ಷನ್‌ಗಳು ಹಾಗೂ ಪಡುಬಿದ್ರೆ, ಕೋಟ, ಬ್ರಹ್ಮಾವರ, ಕುಂದಾಪುರದ ಪ್ರಮುಖ ಸ್ಥಳಗಳಲ್ಲಿ ಅಗತ್ಯವಿರುವ ಕಡೆ ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು. ಶಾಲಾ-ಕಾಲೇಜುಗಳ ಬಳಿ ಸೂಚನಾ ಫಲಕ, ವೇಗತಡೆ, ಬ್ಯಾರಿಕೇಡ್ ಹಾಗೂ ಝೀಬ್ರಾ ಕ್ರಾಸಿಂಗ್‌ಗಳ ವ್ಯವಸ್ಥೆ ಮಾಡಬೇಕು. ಎಲ್ಲಾ ಬಸ್‌ಗಳಿಗೆ ಬಾಗಿಲು ಹಾಗೂ ಕಸದ ಬುಟ್ಟಿ ಅಳವಡಿಸಿರುವುದನ್ನು ಖಚಿತಪಡಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಮಗಾರಿ ಬಳಿಕ ತೆರೆದಿರುವ ರಸ್ತೆ ವಿಭಜಕಗಳನ್ನು ಬಂದ್ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
