ಸ್ಟಿಂಗ್ ಆಪರೇಷನ್: ನನ್ನನ್ನೇ ತನಿಖೆ ಮಾಡಿ, ಕಾರ್ಯಕರ್ತನನ್ನೇಕೆ ಬಂಧಿಸಿದ್ದೀರಿ? ಎಚ್‌ಡಿಕೆ ಪ್ರಶ್ನೆ

ಬೆಂಗಳೂರು: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ 'ಸ್ಟಿಂಗ್ ಆಪರೇಷನ್' ಕೋಲಾಹಲದ ಬಗ್ಗೆ ಹಾಲಿ ನ್ಯಾಯಾಧೀಶ ನೇತೃತ್ವದಲ್ಲಿ ತನಿಖೆ ಮಾಡಲಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಗುರುವಾರ ಬೆಂಗಳೂರಿನಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ಅವರು, ಪೊಲೀಸರನ್ನು ಇಟ್ಟುಕೊಂಡು ಸಿನಿಮಾ ತರ ಬೆದರಿಕೆ ಹಾಕ್ತಿರಾ? ನಾನೇ ಬರ್ತಿನಿ, ನನ್ನನ್ನೇ ಬಂಧಿಸಿ, ನನ್ನನ್ನು ತನಿಖೆಗೆ ಒಳಪಡಿಸಿ. ನನ್ನ ಬದಲಾಗಿ ಪಕ್ಷದ ಕಾರ್ಯಕರ್ತರ ಮೇಲೆ ಯಾಕೆ ತನಿಖೆ ಮಾಡುತ್ತೀರಾ? ಎಂದು ಎಚ್ಡಿಕೆ ಅವರು ಸರಕಾರಕ್ಕೆ ಸವಾಲು ಹಾಕಿದರು.

ಈ ರಾಜ್ಯದಲ್ಲಿ ಅನಾಗರಿಕ ಸರ್ಕಾರ ಇದೆ. ತಮಗೆ ಬೇಕಾದಂತೆ ಆಟ ಆಡ್ತಿದ್ದಾರೆ, ಇದರಿಂದಾಗಿ ಕೆಲವು ಅಧಿಕಾರಿಗಳು ಯಾತನೆ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡೋ ಪರಿಸ್ಥಿತಿ ಬಂತಾ ಅಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಪಕ್ಷದ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಯುವಕನನ್ನು ಪೊಲೀಸರು ಬೆಳಿಗ್ಗೆ 6.30ಕ್ಕೆ ಕರೆದುಕೊಂಡು, ರಾತ್ರಿ 8 ಗಂಟೆವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು. ಅದ್ಯಾವುದೋ ಸ್ಥಳದಲ್ಲಿ ಕರೆದುಕೊಂಡು, ಧೂಳಿನಲ್ಲಿ ಕೂರಿಸಿಕೊಂಡು ಹೇಳಿಕೆ ಕೊಡುವಂತೆ ಒತ್ತಾಯಿಸಿದ್ದರು. ಅದಲ್ಲದೆ, ನಮ್ಮ ವಾರ್ ರೂಮ್ ನಲ್ಲಿ ಕೆಲಸ ಮಾಡೋನಿಗೆ ಫೋನ್ ಮಾಡಿ ಹೇಳಿಕೆ ನೀಡುವಂತೆ ಕಿರುಕುಳ ಕೊಟ್ಟಿದ್ದಾರೆ. ನಿಮ್ಮ ಸಿಎಂ ಕಚೇರಿಯಲ್ಲಿ ಇದ್ದಾರಲ್ಲಾ ಅಧಿಕಾರಿಗಳು, ಅವರ ಪೋನ್ ಟ್ಯಾಪ್ ಮಾಡಿ ತನಿಖೆ ಮಾಡಿ, ಎಲ್ಲಾ ಹೊರಗಡೆ ಬರುತ್ತದೆ ಎಂದು ಕಿಡಿ ಕಾರಿದರು.

ಸೈಬರ್ ಕ್ರೈಮ್ ಪೊಲೀಸ್ ನವರು ನಿನ್ನೆ ರಾತ್ರಿ ನೋಟಿಸ್ ಕೊಡ್ತಾರೆ. ಯಾವ ಆಧಾರದ ಮೇಲೆ ಎಕ್ಸ್ ಟ್ರಾಕ್ಷನ್ ಮಾಡಿದ್ದಾನೆ ಅಂತಾ ನೋಟಿಸ್ ಕೊಡ್ತೀರಿ ಎಂದು ಆರೋಪಿಸಿದ ಅವರು, ಪೊಲೀಸರು ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋ ಯುವಕನ ಮನೆಗೆ ಹೋದ ವಿಡಿಯೋ ಬಿಡುಗಡೆ ಮಾಡಿದರು.

ನಮ್ಮ ಹುಡುಗ ಮೋಹನ್ ಗೌಡ ಎಂಬಾತನ ಮನೆಗೆ ರಾತ್ರಿ 8 ಗಂಟೆಗೆ ಹೋಗಿ ಮನೆ ಬಾಗಿಲು ತಟ್ಟಿದ್ರೆ ಆ ರಾತ್ರಿ ಹೆಣ್ಣು ಮಗಳಿಗೆ ಏನು ಆಗಬೇಕು? ಪೊಲೀಸ್ ನವರು ಹೇಳ್ತಾರೆ ನಿಮ್ಮ ಮೊಬೈಲ್, ಲ್ಯಾಪ್ ಟಾಪ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕೊಡಿ ಎಂದು ಒತ್ತಾಯಿಸಿದ್ದರು. ನಾನು ಪೊಲೀಸ್ ಕಮಿಷನರ್ ಗೆ ಕೇಳ್ತೀನಿ, ಬೇರೆ ಎಲ್ಲೋ ಯಾಕೆ ಹುಡುಕುತ್ತೀರಾ ನಿಮ್ಮ ಸಿಎಂ ಮನೆಗೆ ಹೋಗಿ ಹುಡುಕಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಪಾಪ ಸಿದ್ದರಾಮಯ್ಯ ಪೆನ್ ಡ್ರೈವ್ ಕೊಟ್ಟಿದ್ದಾರಲ್ಲಾ, ಆ ಹೆಣ್ಣು ಮಗಳು ಯಾರು ಮಿಸ್ಟರ್ ಡಿಕೆ ಶಿವಕುಮಾರ್ ? ಆ ಹೆಣ್ಣು ಮಗಳನ್ನು ಕೂರಿಸಿಕೊಂಡು ಎಕ್ಸ್ ಪ್ಲೈನ್ ಮಾಡಿದ್ದೀರಾ? ಸಿದ್ದರಾಮಯ್ಯ ಇನ್ನೂ ದೂರು ಕೊಟ್ಟಿಲ್ಲ, ಇನ್ನೂ ಎಫ್ ಐ ಆರ್ ದಾಖಲಾಗಿಲ್ಲ. ಇವರು ಬಂದಿರುವ ಗರಡಿ ಯಾವುದು? ಸಿನಿಮಾ ಮಾಡಿದ ಹಾಗೆ ರಾಜ್ಯ ಆಳೋದಾ? ಎಂದು ಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ನಾಯಕರೇ, ನಿಮ್ಮ ಆತ್ಮಸಾಕ್ಷಿಗೆ ತಕ್ಕದಾಗಿ ಮಾತನಾಡಿ. ಸಿದ್ದರಾಮಯ್ಯ ಅವರನ್ನು ಯಾಕೆ ಅಧಿಕಾರದಿಂದ ಕೆಳಗಡೆ ಇಳಿಸಿದ್ರಿ? ವಿಡಿಯೋದಲ್ಲಿ ಧ್ವನಿ ಕೇಳುವ ಆ ಹೆಣ್ಣು ಮಗಳು ಯಾವ ಪಕ್ಷದವರು? ಯಾವುದಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ರಿ? ಅವರು ಮಾಧ್ಯಮಗಳ ವಿರುದ್ಧ ಯಾಕೆ ಸ್ಟೇ ಪಡೆದುಕೊಂಡರು ಎಂದು ಪ್ರಶ್ನಿಸಿದರು.

ಸ್ಟಿಂಗ್ ಆಪರೇಶನ್ ಮಾಡಿದವನನ್ನು ಯಾಕೆ ಇನ್ನೂ ಅರೆಸ್ಟ್ ಮಾಡಿಲ್ಲ? ಅವರ ಬಗ್ಗೆ ನಿಮಗೆ ಧ್ವನಿ ಎತ್ತಲು ಉಸಿರೇಕಿಲ್ಲ? ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಎಂ ಆಗಿದ್ದಾಗಲೆ ಸ್ಟಿಂಗ್ ಬಗ್ಗೆ ಗೊತ್ತಿತ್ತು. ಅದಕ್ಕೇ ಆ ಪತ್ರಕರ್ತರ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದರು. ಇನ್ನು ಯಾವುದು ಇಟ್ಟುಕೊಂಡಿದ್ದಾರೊ ಅಂತ ಭಯ ಎಂದು ಕುಮಾರಸ್ವಾಮಿ ಕಿಡಿಕಾರಿದರು.