CJP ಪ್ರತಿಭಟನೆ ತಂದ ಸಂಕಷ್ಟ; ದೇಶ ಬಿಡುವಂತೆ ನಟ ಇಮ್ರಾನ್‌ ಖಾನ್‌ಗೆ ಮುಂಬೈ ಪೊಲೀಸರ ಸೂಚನೆ

ಮುಂಬೈ: ಬಾಲಿವುಡ್‌ ನಟ ಮತ್ತು ಅಮಿರ್‌ ಖಾನ್‌ ಅಳಿಯ ಇಮ್ರಾನ್‌ ಖಾನ್‌ ಅವರಿಗೆ ಭಾರೀ ಸಂಕಷ್ಟವೊಂದು ಎದುರಾಗಿದೆ. ಚುನಾವಣಾ ಆಯೋಗದ ವಿರುದ್ಧ ಕಾಕ್ರೊಚ್‌ ಜನತಾ ಪಾರ್ಟಿ (ಸಿಜೆಪಿ) ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇಮ್ರಾನ್‌ ಖಾನ್‌ ಅವರಿಗೆ, ದೇಶ ತೊರೆಯುವಂತೆ ಮುಂಬೈ ಪೊಲೀಸರು ಸೂಚನೆ ನೀಡಿದ್ದಾರೆ. 

ಕಳೆದ ಅ.10ರಂದು ಸಿಜೆಪಿ ಮುಂಬೈನಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ನಗರದ ಆಗಸ್ಟ್‌ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ, ಬಾಲಿವುಡ್‌ ನಟ ಇಮ್ರಾನ್ ಖಾನ್‌ ಭಾಗವಹಿಸಿದ್ದರು. ಈ ವೇಳೆ ಮುಂಬೈ ಪೊಲೀಸರು ಅವರನ್ನು ಬಂಧಿಸಿ ತದನಂತರ ಬಿಡುಗಡೆ ಮಾಡಿದ್ದರು. ಆದರೀಗ, ಅಮಿರ್‌ ಖಾನ್‌ ಅಳಿಯನಿಗೆ ದೇಶ ತೊರೆಯುವಂತೆ ಮುಂಬೈ ಪೊಲೀಸರು ಸೂಚಿಸಿದ್ದಾರೆ.

ಮುಂಬೈ ಪೊಲೀಸರು ನೀಡಿರುವ ನೋಟಿಸ್‌ನಲ್ಲಿ, ಅಕ್ಟೋಬರ್ 28ರೊಳಗೆ ದೇಶ ತೊರೆಯುವಂತೆ ಇಮ್ರಾನ್‌ ಖಾನ್‌ಗೆ ಗಡುವು ನೀಡಲಾಗಿದೆ. ಅಮಿರ್‌ ಖಾನ್‌ ಅಳಿಯ ಅಮೆರಿಕದ ಪೌರತ್ವವನ್ನು ಹೊಂದಿದ್ದು, ಭಾರತದ ಪೂರ್ಣ ಪ್ರಮಾಣದ ಪೌರತ್ವದ ಬದಲಿಗೆ 'ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ' (OCI) ಕಾರ್ಡ್ ಹೊಂದಿದ್ದಾರೆ. 

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟಿಸಲು ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಜಮಾಯಿಸಿದವರಲ್ಲಿ, ಬಾಲಿವುಡ್‌ ನಟ ಇಮ್ರಾನ್‌ ಖಾನ್‌ ಕೂಡ ಒಬ್ಬರಾಗಿದ್ದರು. ಇಮ್ರಾನ್‌ ಖಾನ್‌ ಸಂಗಾತಿ ನಟಿ ಲೇಖಾ ವಾಷಿಂಗ್ಟನ್ ಮತ್ತು ಸೋದರಸಂಬಂಧಿ ಝೇನ್ ಮೇರಿ ಖಾನ್ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

ಪ್ರತಿಭಟನೆಯ ವೇಳೆ ಈ ಮೂವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ನಂತರ ಎಲ್ಲರನ್ನೂ ಬಿಡುಗಡೆ ಮಾಡಿದ್ದರು. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿರ್‌ ಖಾನ್‌ ಅವರ ಅಳಿಯ ಆಗಿರುವ ಇಮ್ರಾನ್‌ ಖಾನ್‌, ಸಿಜೆಪಿ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ದೇಶಾದ್ಯಂತ ಗಮನ ಸೆಳೆದಿದ್ದರು.