ಭಾರತದ ಮೇಲೆ ಸುಂಕ ಹೇರಿ ಈಗ ರಷ್ಯಾದಿಂದಲೇ ಡೀಸೆಲ್ ಖರೀದಿಗೆ ಮುಂದಾದ ಟ್ರಂಪ್!

ವಾಷಿಂಗ್ಟನ್: ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ ಎಂಬ ಕಾರಣಕ್ಕೆ ಈ ಹಿಂದೆ ಭಾರತದ(India) ಮೇಲೆ ಹೆಚ್ಚುವರಿ ತೆರಿಗೆ ಮತ್ತು ದಂಡನಾತ್ಮಕ ಕ್ರಮಗಳನ್ನು ಜರುಗಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇದೀಗ ತಾವೇ ರಷ್ಯಾದಿಂದ ನೇರವಾಗಿ ಡೀಸೆಲ್(Diesel) ಖರೀದಿಸಲು ಮುಂದಾಗುವ ಮೂಲಕ ಯೂ-ಟರ್ನ್ ಹೊಡೆದಿದ್ದಾರೆ.

ಮುಂಬರುವ ಮಹತ್ವದ ಯುಎಸ್ ಮಧ್ಯಂತರ ಚುನಾವಣೆಗಳ ಹಿನ್ನೆಲೆಯಲ್ಲಿ ದೇಶೀಯವಾಗಿ ಗಗನಕ್ಕೇರಿರುವ ಇಂಧನ ದರಗಳನ್ನು ನಿಯಂತ್ರಿಸಲು ಟ್ರಂಪ್ ಮಾಸ್ಕೋ ಮೇಲಿನ ಯುದ್ಧ ನಿರ್ಬಂಧಗಳನ್ನು ಸಡಿಲಿಸಿದ್ದು, ರಷ್ಯಾದಿಂದ(Russia) ಲಕ್ಷಾಂತರ ಟನ್ ಡೀಸೆಲ್ ಆಮದು ಮಾಡಿಕೊಳ್ಳುವ ಒಪ್ಪಂದವನ್ನು ಪ್ರಕಟಿಸಿದ್ದಾರೆ.

ಅಮೆರಿಕದಲ್ಲಿ ಜೀವನ ವೆಚ್ಚ ವಿಪರೀತವಾಗಿ ಹೆಚ್ಚಿದ್ದು, ಮತದಾರರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇದರಿಂದಾಗಿ ಕಾಂಗ್ರೆಸ್ (ಸಂಸತ್ತು) ಮೇಲಿನ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿರುವ ರಿಪಬ್ಲಿಕನ್ ಪಕ್ಷಕ್ಕೆ ಈ ಚುನಾವಣೆ ಅತ್ಯಂತ ನಿರ್ಣಾಯಕವಾಗಿದೆ.

ಫೆಬ್ರವರಿಯಲ್ಲಿ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯ ಬಳಿಕ, ವಿಶ್ವದ ಪ್ರಮುಖ ಇಂಧನ ಜಲಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಟೆಹ್ರಾನ್ ನಿರ್ಬಂಧಿಸಿತ್ತು. ಪರಿಣಾಮವಾಗಿ, ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಶೇ. 46ರಷ್ಟು ಜಿಗಿದು ಪ್ರತಿ ಗ್ಯಾಲನ್‌ಗೆ 4.37 ಡಾಲರ್‌ ತಲುಪಿದ್ದರೆ, ಡೀಸೆಲ್ ಬೆಲೆ ಶೇ. 67ರಷ್ಟು ಏರಿಕೆಯಾಗಿ ಪ್ರತಿ ಗ್ಯಾಲನ್‌ಗೆ 6.28 ಡಾಲರ್‌ ತಲುಪಿದೆ.