ಮತದಾರರ ಪಟ್ಟಿ ಪರಿಷ್ಕರಣೆ ವಿವಾದಕ್ಕೆ ಹೊಸ ತಿರುವು: ಜ್ಞಾನೇಶ್ ಕುಮಾರ್‌ಗೆ ಸುಪ್ರೀಂ ನೋಟಿಸ್; ವಿಪಕ್ಷಗಳ ನಿಲುವಿಗೆ ಕಾನೂನುಬಲ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಮತ್ತು ಲಕ್ಷಾಂತರ ಅರ್ಹ ನಾಗರಿಕರ ಮತಗಳನ್ನು ಏಕಪಕ್ಷೀಯವಾಗಿ ಅಳಿಸಿಹಾಕಲಾಗಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ‘ಇಂಡಿ’ ಮೈತ್ರಿಕೂಟದ ಪ್ರಮುಖ ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಸರ್ವೊಚ್ಚ ನ್ಯಾಯಾಲಯದ ಪೀಠವು ಈ ನೋಟಿಸ್ ನೀಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿಯವರು ಅರ್ಜಿಯಲ್ಲಿ ಮಾಡಿರುವ ಗಂಭೀರ ಆರೋಪಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರಿಂದ  ಸಮಗ್ರ ಪ್ರತಿಕ್ರಿಯೆ ಕೇಳಿದೆ. ಅರ್ಜಿಯಲ್ಲಿ ಹೆಸರಿಸಲಾದ ಭಾರತೀಯ ಚುನಾವಣಾ ಆಯೋಗ ಮತ್ತು ಮೂವರೂ ಚುನಾವಣಾ ಆಯುಕ್ತರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ್ದು, ನಿಗದಿತ ಕಾಲಮಿತಿಯೊಳಗೆ ಲಿಖಿತ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿದೆ.

ವಿಪಕ್ಷಗಳ ಪ್ರಮುಖ ವಾದ: ಯಾವುದೇ ಮುನ್ಸೂಚನೆ ಇಲ್ಲದೆ ಹಾಗೂ ಮತದಾರರಿಗೆ ತಮ್ಮ ವಾದ ಮಂಡಿಸಲು ಕಾಲಾವಕಾಶ ನೀಡದೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ರದ್ದುಪಡಿಸಿರುವುದು ಸಂವಿಧಾನದ 324ನೇ ವಿಧಿ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಅರ್ಜಿದಾರರ ಪರ ವಕೀಲರು ಪೀಠದ ಮುಂದೆ ಪ್ರತಿಪಾದಿಸಿದರು. ಎಸ್‌ಐಆರ್ ಪ್ರಕ್ರಿಯೆಯ ಮೇಲೆ ಮಧ್ಯಂತರ ತಡೆಯಾಜ್ಞೆ ನೀಡುವುದು ಹಾಗೂ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ಆಡಿಟ್ ನಡೆಸುವ ಕೋರಿಕೆಯ ಕುರಿತು ಆಯೋಗದ ಉತ್ತರ ಬಂದ ನಂತರ ನಿರ್ಧರಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಅರ್ಜಿದಾರ ನಾಯಕರು: ರಾಹುಲ್ ಗಾಂಧಿ ಜೊತೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಟಿಎಂಸಿ ಸಂಸದ ಸೌಗತ ರಾಯ್, ಶಿವಸೇನಾ (ಯುಬಿಟಿ) ಮುಖಂಡ ಸಂಜಯ್ ರಾವತ್, ಎನ್‌ಸಿಪಿ (ಎಸ್‌ಪಿ) ನಾಯಕಿ ಸುಪ್ರಿಯಾ ಸುಳೆ, ಡಿ. ರಾಜಾ (ಸಿಪಿಐ), ಎಂ.ಎ. ಬೇಬಿ (ಸಿಪಿಐ-ಎಂ), ಮಹುವಾ ಮಾಝಿ (ಜೆಎಂಎಂ) ಹಾಗೂ ಇ.ಟಿ. ಮೊಹಮ್ಮದ್ ಬಶೀರ್ (ಐಯುಎಂಎಲ್) ಜಂಟಿ ಸಹಿದಾರರಾಗಿದ್ದಾರೆ.

ಪ್ರತಿವಾದಿಗಳು: ಚುನಾವಣಾ ಆಯೋಗದ ಪೂರ್ಣ ಪೀಠವನ್ನು (ಸಿಇಸಿ ಜ್ಞಾನೇಶ್ ಕುಮಾರ್, ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ) ಪ್ರಕರಣದಲ್ಲಿ ವೈಯಕ್ತಿಕ ಹಾಗೂ ಅಧಿಕೃತ ನೆಲೆಯಲ್ಲಿ ಹೊಣೆಗಾರರನ್ನಾಗಿ ಮಾಡಲಾಗಿದೆ.

ಅಕ್ಟೋಬರ್ 12 ರಂದು ದೆಹಲಿಯಲ್ಲಿ ವಿಪಕ್ಷಗಳು ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಸುಪ್ರೀಂ ಕೋರ್ಟ್‌ಗೆ ಮನವಿ ಪತ್ರ ಸಲ್ಲಿಸಿದ್ದವು. ರಾಜಕೀಯ ಆಂದೋಲನದ ಬೆನ್ನಲ್ಲೇ ನ್ಯಾಯಾಲಯವೂ ನೋಟಿಸ್ ಜಾರಿ ಮಾಡಿರುವುದು ವಿಪಕ್ಷ ಬಣದ ನಿಲುವಿಗೆ ಹೆಚ್ಚಿನ ನೈತಿಕ ಮತ್ತು ಕಾನೂನಾತ್ಮಕ ಬಲ ತಂದಿದೆ. ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು, ಮೃತಪಟ್ಟವರು ಮತ್ತು ವಲಸೆ ಹೋದವರನ್ನು ನಿಯಮಾನುಸಾರ ತೆಗೆದುಹಾಕಲು ಎಸ್‌ಐಆರ್ ಜಾರಿಗೊಳಿಸಲಾಗಿದೆ ಎಂದು ಆಯೋಗ ಈ ಹಿಂದೆ ಸಮರ್ಥಿಸಿಕೊಂಡಿತ್ತು. ಈಗ ಸುಪ್ರೀಂ ಕೋರ್ಟ್‌ಗೆ ಅಂಕಿಅಂಶ ಸಹಿತ ದಾಖಲೆಗಳನ್ನು ಒದಗಿಸುವುದು ಆಯೋಗಕ್ಕೆ ಅನಿವಾರ್ಯವಾಗಿದೆ.