CJP ಪ್ರತಿಭಟನೆಗೂ ಮುನ್ನ ಯೂಟ್ಯೂಬರ್ ಧ್ರುವ್ ರಾಠಿಯನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರು; ತಕ್ಷಣ ಬಿಡುಗಡೆಗೆ CJP ಆಗ್ರಹ

ನವದೆಹಲಿ: ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ಶನಿವಾರ ಗುರುಗ್ರಾಮದ ಸೆಕ್ಟರ್ 56ರಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜಂತರ್ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ಹಮ್ಮಿಕೊಂಡಿರುವ ಪ್ರತಿಭಟನೆಗೆ ಮುನ್ನ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಧ್ರುವ್ ರಾಠಿ ಆಗಮಿಸಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಶನಿವಾರ ಬೆಳಗ್ಗೆ ದೆಹಲಿ ಪೊಲೀಸರ ಸುಮಾರು 50 ಸಿಬ್ಬಂದಿಯ ತಂಡ ಗುರುಗ್ರಾಮದಲ್ಲಿರುವ ರಾಠಿ ಅವರ ನಿವಾಸಕ್ಕೆ ತೆರಳಿ ಅವರನ್ನು ವಶಕ್ಕೆ ಪಡೆದಿದೆ.

ಈ ಕ್ರಮಕ್ಕೆ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ CJP, ಧ್ರುವ್ ರಾಠಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದೆ.

ಶುಕ್ರವಾರ ಸಂಜೆ ರಾಠಿ ಅವರು ತಮ್ಮ ಎಕ್ಸ್‌ (X) ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು, ಶನಿವಾರದ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳನ್ನು ಟೀಕಿಸುತ್ತಾ ಬಂದಿರುವ ಧ್ರುವ್ ರಾಠಿ, ಈ ವಾರದ ಆರಂಭದಲ್ಲಿ ಜರ್ಮನಿಯಿಂದ ಭಾರತಕ್ಕೆ ಆಗಮಿಸಿದ್ದರು. ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ನಡೆದ CJP ಪ್ರತಿಭಟನೆಯಲ್ಲಿಯೂ ಅವರು ಭಾಗವಹಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ್ ರಾಠಿ ಅಪಾರ ಅನುಯಾಯಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ 1.92 ಕೋಟಿ, ಎಕ್ಸ್‌ನಲ್ಲಿ 33 ಲಕ್ಷ ಹಾಗೂ ಯೂಟ್ಯೂಬ್‌ನಲ್ಲಿ 3.3 ಕೋಟಿ ಚಂದಾದಾರರನ್ನು ಹೊಂದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಗೆ ಅನುಮತಿ ನಿರಾಕರಣೆ

ಭದ್ರತಾ ಕಾರಣಗಳು ಹಾಗೂ ಅಗತ್ಯ ಪ್ರಕ್ರಿಯೆಗಳ ಉಲ್ಲಂಘನೆಯ ಸಾಧ್ಯತೆಯನ್ನು ಉಲ್ಲೇಖಿಸಿ, ಪ್ರತಿಭಟನೆಗೆ ದೆಹಲಿ ಪೊಲೀಸರು ಈ ವಾರದ ಆರಂಭದಲ್ಲೇ ಅನುಮತಿ ನಿರಾಕರಿಸಿದ್ದರು.

ಪ್ರತಿಭಟನಾಕಾರರು ನಿಗದಿತ ಸ್ಥಳವನ್ನು ತಲುಪದಂತೆ ತಡೆಯಲು ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಇಂದು ದೆಹಲಿಯ ಕೇಂದ್ರ ಭಾಗದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಮುನ್ನ, ರಾತ್ರೋರಾತ್ರಿ 400ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ನೂರಾರು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಹಲವು ಮೆಟ್ರೋ ನಿಲ್ದಾಣಗಳನ್ನೂ ಮುಚ್ಚಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರನ್ನು ಒಗ್ಗೂಡಿಸಲು CJP ಮುಂದಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 20,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಿದೆ ಎಂದು ವರದಿ ತಿಳಿಸಿದೆ.