'ನಾನು ಭಾರತೀಯ ಪ್ರಜೆ, ಮುಂದೆಯೂ ಭಾರತೀಯನಾಗಿಯೇ ಇರುತ್ತೇನೆ’: ತನ್ನ ರಾಷ್ಟ್ರೀಯತೆಯ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿದ ಧ್ರುವ್ ರಾಠಿ

ನವದೆಹಲಿ: ಯೂಟ್ಯೂಬರ್ ಧ್ರುವ್ ರಾಠಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್‌ ಪ್ರದರ್ಶಿಸುವ ಮೂಲಕ ತಮ್ಮ ರಾಷ್ಟ್ರೀಯತೆಯ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ರವಿವಾರ ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, “ಇದು ನನ್ನ ಪಾಸ್‌ಪೋರ್ಟ್‌. ನಾನು ಭಾರತೀಯ ಪ್ರಜೆ, ಮುಂದೆಯೂ ಭಾರತೀಯ ಪ್ರಜೆಯಾಗಿಯೇ ಇರುತ್ತೇನೆ” ಎಂದು ಅವರು ತನ್ನ ಪಾಸ್ಪೋರ್ಟ್ ಎತ್ತಿ ತೋರಿಸುವ ಮೂಲಕ ಟೀಕೆಕಾರರ ಬಾಯಿಮುಚ್ಚಿಸುವ ಯತ್ನ ನಡೆಸಿದ್ದಾರೆ.  

ತಮ್ಮನ್ನು ವಶಕ್ಕೆ ಪಡೆದ ಘಟನೆಯನ್ನು ಸಮರ್ಥಿಸಿಕೊಳ್ಳಲು ಕೆಲವು ಮಾಧ್ಯಮಗಳು ತಮ್ಮ ಪೌರತ್ವದ ಕುರಿತು ತಪ್ಪು ಮಾಹಿತಿ ಹರಡುತ್ತಿವೆ ಎಂದು ರಾಠಿ ಆರೋಪಿಸಿದ್ದಾರೆ. ಅಲ್ಲದೆ, ಇನ್ನು ಮುಂದೆ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಾವು ಮುಚ್ಚಳಿಕೆ ನೀಡಿದ್ದಾಗಿ ಹರಿದಾಡುತ್ತಿರುವ ಸುದ್ದಿಯನ್ನೂ ಅವರು ನಿರಾಕರಿಸಿದ್ದಾರೆ.

ಶನಿವಾರ ಬೆಳಗ್ಗೆ ಸುಮಾರು 7 ಗಂಟೆಗೆ ಸಾಮಾನ್ಯ ಉಡುಪಿನಲ್ಲಿದ್ದ ಸುಮಾರು 20 ಮಂದಿ ತಮ್ಮ ನಿವಾಸಕ್ಕೆ ಪ್ರವೇಶಿಸಿ, ತಾವು ನಿದ್ರಿಸುತ್ತಿದ್ದಾಗ ಅಲ್ಲಿಂದ ಕರೆದೊಯ್ದರು ಎಂದು ರಾಠಿ ಆರೋಪಿಸಿದ್ದಾರೆ. ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದ್ದು, ಸುಮಾರು 22–23 ಗಂಟೆಗಳ ಕಾಲ ವಕೀಲರನ್ನು ಸಂಪರ್ಕಿಸಲು ಅಥವಾ ಫೋನ್ ಬಳಸಲು ಅವಕಾಶ ನೀಡಲಿಲ್ಲ ಎಂದೂ ಅವರು ಹೇಳಿದ್ದಾರೆ. ತಮ್ಮ ಮಲಗುವ ಕೋಣೆಯಿಂದ ಹೊರಗೆ ಕರೆದೊಯ್ಯುವ ಸಂದರ್ಭದಲ್ಲಿ ಗಾಯಗಳಾಗಿವೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಗೆ ಮುನ್ನ ವಿಧಿಸಲಾದ ನಿರ್ಬಂಧಗಳನ್ನು ಟೀಕಿಸಿದ ಅವರು, ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳ ಕುರಿತು ತಮ್ಮ ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಚಲನವಲನಗಳ ಮೇಲೆ ನಿಗಾ ಇರಿಸಲಾಗುತ್ತಿದ್ದು, ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ.