ಒತ್ತಡದ ಕಡಿಮೆ ಮಾಡಲು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿ: ಹರಿಪ್ರಸಾದ್ ರೈ

ಮಾನಸಿಕ ಆರೋಗ್ಯ ಕಾಪಾಡಲು ಯೋಗ, ಧ್ಯಾನ ಮತ್ತು ವ್ಯಾಯಾಮ ಅಗತ್ಯ

ಉಡುಪಿ: ಬಾಲ್ಯದಿಂದ ವೃದ್ಧಾಪ್ಯದವರೆಗೆ ಒತ್ತಡದ ಜೀವನ ಅನಿವಾರ್ಯವಾಗುತ್ತಿದೆ. ಹಿಂದೆ ನಮ್ಮ ಹಿರಿಯರು ಭೂತಕೋಲದಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಇಂದು ಪ್ಲೇ ಸ್ಕೂಲ್ ಮಕ್ಕಳಿಗೂ ಅಂಕ, ಪರೀಕ್ಷೆ ಸೇರಿದಂತೆ ಹಲವು ರೀತಿಯ ಒತ್ತಡಗಳು ಎದುರಾಗುತ್ತಿವೆ. ವಯಸ್ಕರೂ ವಿವಿಧ ಕಾರಣಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ಕಡಿಮೆ ಮಾಡಲು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ನಿತ್ಯ ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವ ಮೂಲಕ ದೇಹ ಹಾಗೂ ಮನಸ್ಸನ್ನು ಒತ್ತಡದಿಂದ ದೂರವಿಡಲು ಪ್ರಯತ್ನಿಸಬೇಕು ಎಂದು ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ ಹೇಳಿದರು.

ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಎ.ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆ, ಮುಂಬೈನ ಕಮಲಾ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಮಣಿಪಾಲ, ಲಯನ್ಸ್ ಕ್ಲಬ್ ಆಫ್ ಉಡುಪಿ ಲಕ್ಷ್ಯ, ಲಯನ್ಸ್ ಡಿಸ್ಟ್ರಿಕ್ಟ್ 317 ಸಿ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಕರಾವಳಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ಸಭಾ ಕಾರ್ಯಕ್ರಮಕ್ಕೂ ಮುನ್ನ ‘ಅಭಯ’, ‘ಪರಿವರ್ತನ’, ‘ಬಂಧು’ ಡೇ-ಕೇರ್ ಸೆಂಟರ್‌ಗಳು ಹಾಗೂ ‘ಹೊಂಬೆಳಕು’ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅವರು ರಚಿಸಿದ ಚಿತ್ರಕಲೆ ಮತ್ತು ಸೃಜನಾತ್ಮಕ ಕರಕುಶಲ ವಸ್ತುಗಳ ಪ್ರದರ್ಶನವನ್ನೂ ಉದ್ಘಾಟಿಸಲಾಯಿತು. ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಂಡು ಉತ್ತಮ ಜೀವನ ನಡೆಸುತ್ತಿರುವವರನ್ನು ಹಾಗೂ ಅವರ ಆರೈಕೆದಾರರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಆಟೋಟ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಮನೋವೈದ್ಯ ವಿರೂಪಾಕ್ಷ ದೇವರಮನೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ದ್ವಿತೀಯ ಉಪ ಜಿಲ್ಲಾ ಗವರ್ನರ್ ರಮಾನಂದ ಕೆ., ಜಾಗತಿಕ ಅಭಿಯಾನಗಳ (ಮಾನಸಿಕ ಆರೋಗ್ಯ) ಮುಖ್ಯ ಸಂಯೋಜಕ ರವಿರಾಜ ನಾಯಕ್, ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಕೃಷ್ಣಮೂರ್ತಿ ಉಪಾಧ್ಯಾಯ, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷ ಹೆರಾಲ್ಡ್ ಸೋನ್ಸ್, ಕಾರ್ಯಕ್ರಮ ಸಂಯೋಜಕ ಡಾ. ಎಚ್. ಗಣೇಶ್ ಪೈ, ಐಎಂಎ ಉಡುಪಿ ಕರಾವಳಿ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಉಪಾಧ್ಯಾಯ, ಡಾ. ಮಾನಸ್ ಈ.ಆರ್. ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿದರು. ಪದ್ಮಾ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಆಪ್ತ ಸಮಾಲೋಚಕಿ ಜಮೀಲಾ ರಹೀಂ ವಂದಿಸಿದರು.