‘ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಬಾಲ್ಯದಿಂದಲೇ ಅರಿಯಬೇಕು’; ಕಾಡು ಉಳಿದರೆ ನೀರು, ಗಾಳಿ, ಮಣ್ಣು ಸೇರಿದಂತೆ ಜೀವಜಾಲವೂ ಉಳಿಯುತ್ತದೆ: ಮಂಜುನಾಥ್ ಪೂಜಾರಿ

ಉಡುಪಿ: ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆಯ ಮಹತ್ವವನ್ನು ಮಕ್ಕಳಿಗೆ ಬಾಲ್ಯದಿಂದಲೇ ತಿಳಿಸಬೇಕು. ಕಾಡು, ವನ್ಯಜೀವಿ ಹಾಗೂ ಪರಿಸರ ಪರಸ್ಪರ ಅವಿನಾಭಾವ ಸಂಬಂಧ ಹೊಂದಿದ್ದು, ಅವುಗಳ ಸಂರಕ್ಷಣೆಯಿಂದ ಮಾತ್ರ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಸಾಧ್ಯ ಎಂದು ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಹೇಳಿದರು.

ಕುದುರೆಮುಖ–ಕಾರ್ಕಳ ವನ್ಯಜೀವಿ ವಿಭಾಗದ ವತಿಯಿಂದ ‘ಆವಾಸಸ್ಥಾನಗಳ ಸಂಪರ್ಕ, ಸಮೃದ್ಧಿ–ವನ್ಯಜೀವಿ ಆಶಯ’ದಡಿ ಅ.2ರಿಂದ 8ರವರೆಗೆ ಆಯೋಜಿಸಿದ್ದ ವಿವಿಧ ಜಾಗೃತಿ, ಪ್ರಚಾರ ಹಾಗೂ ಸಮುದಾಯ ಸಹಭಾಗಿತ್ವ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೆರ್ವಾಜೆ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಡು ಉಳಿದರೆ ನೀರು, ಗಾಳಿ, ಮಣ್ಣು ಸೇರಿದಂತೆ ಜೀವಜಾಲವೂ ಉಳಿಯುತ್ತದೆ. ಪ್ರತಿಯೊಂದು ಜೀವಿಗೂ ಪರಿಸರ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವದ ಪಾತ್ರವಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಶಾಲಾ ಹಂತದಿಂದಲೇ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಬೇಕು. ವನ್ಯಜೀವಿ ಸಂರಕ್ಷಣೆಯಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕೇಂದ್ರವಾಗಿರಿಸಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಡಿಎಫ್‌ಒ ರವಿಶಂಕರ್ ಐಎಫ್‌ಎಸ್ ಮಾತನಾಡಿ, ಪಠ್ಯ ಶಿಕ್ಷಣದ ಜತೆಗೆ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಚಟುವಟಿಕೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಸುತ್ತಮುತ್ತಲಿನ ಪಕ್ಷಿಗಳು, ಚಿಟ್ಟೆಗಳು ಹಾಗೂ ಸಸ್ಯ ಪ್ರಭೇದಗಳನ್ನು ಗುರುತಿಸುವಂತಹ ಚಟುವಟಿಕೆಗಳು ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಹಾಗೂ ಸಂರಕ್ಷಣೆಯ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದರು.

ಅರಣ್ಯ ಇಲಾಖೆಯ ಡಿಎಫ್‌ಒ ಪ್ರವೀಣ್ ಕುಮಾರ್ ಶೆಟ್ಟಿ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ವೀಣಾ ರಾಜೇಶ್, ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವೀಣಾ ಶೆಣೈ ಹಾಗೂ ಸಿದ್ಧಾಪುರ ವಲಯದ ಎಸಿಎಫ್ ಜಿ.ಡಿ. ದಿನೇಶ್ ಉಪಸ್ಥಿತರಿದ್ದರು.

ಕುದುರೆಮುಖ ವನ್ಯಜೀವಿ ವಿಭಾಗದ ಎಸಿಎಫ್ ಲತಾ ಗುರು ಭಟ್ಟ ಪ್ರಸ್ತಾವನೆಗೈದು, ವನ್ಯಜೀವಿ ಸಪ್ತಾಹದ ಮುಖ್ಯ ಉದ್ದೇಶ ವನ್ಯಜೀವಿಗಳ ಆವಾಸಸ್ಥಾನಗಳ ಸಂರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸುವುದಾಗಿದೆ. ಅಮೂಲ್ಯ ಅರಣ್ಯ ಸಂಪತ್ತು ಹಾಗೂ ವೈವಿಧ್ಯಮಯ ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೂ ಉಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ವನ್ಯಜೀವಿ ಸಪ್ತಾಹದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಗೌರವಿಸಲಾಯಿತು. ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಭಾಷಣ, ರಸಪ್ರಶ್ನೆ, ಮರ ಮತ್ತು ಪ್ರಾಣಿಗಳ ಗುರುತಿಸುವಿಕೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕುದುರೆಮುಖ–ಕಾರ್ಕಳ ವಲಯದ ಆರ್‌ಎಫ್‌ಒ ಸುಬ್ರಹ್ಮಣ್ಯ ಆಚಾರ್ಯ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವಿನುತಾ ಕಾರ್ಯಕ್ರಮ ನಿರೂಪಿಸಿದರು