‘ಬಸವ ಮಂಟಪ’ ಕೃತಿ ವಿವಾದ; ಬಸವಣ್ಣನವರ ಅವಹೇಳನ ಆರೋಪ: ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಶಕ್ಕೆ

ಬೆಂಗಳೂರು: ‘ಬಸವ ಮಂಟಪ’ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಲೇಖಕ ರವಿ ಹಂಜ್ ಅವರನ್ನು ಕೇರಳದ ಕೊಚ್ಚಿನ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಶನಿವಾರ ವಶಕ್ಕೆ ಪಡೆದಿದ್ದಾರೆ. ರವಿ ಹಂಜ್ ಅವರು ವಿದೇಶಕ್ಕೆ ಪ್ರಯಾಣ ಬೆಳೆಸಲು ಮುಂದಾದಾಗ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಅವರನ್ನು ತಡೆದು, ವಶಕ್ಕೆ ಪಡೆದುಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ. ಬಸವ ಮಂಟಪ ಕೃತಿಯ ಕುರಿತಾದ ವಿವಾದದ ಹಿನ್ನೆಲೆಯಲ್ಲಿ, ರವಿ ಹಂಜ್ ಅವರ ವಿರುದ್ಧ ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಅವರು ಭಾರತದಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಲಾಗಿತ್ತು. ಬೆಳಗಾವಿಯಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿತ್ತು. ಬೆಳಗಾವಿ ಪೊಲೀಸರು ಸಹ ರವಿ ಹಂಜ್ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.

ಕೊಚ್ಚಿನ್ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ರವಿ ಹಂಜ್ ಅವರನ್ನು ವಶಕ್ಕೆ ಪಡೆದ ನಂತರ, ಈ ಕುರಿತು ಬೆಳಗಾವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ಕ್ರಮಗಳನ್ನು ಬೆಳಗಾವಿ ಪೊಲೀಸರು ಕೈಗೊಳ್ಳಲಿದ್ದಾರೆ. ಬಸವ ಮಂಟಪ ಕೃತಿಯ ವಿಷಯದಲ್ಲಿ ನಡೆದ ಬೆಳವಣಿಗೆಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ.