ಇಂದಿನಿಂದ ಸಾರ್ವಜನಿಕರಿಂದ ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧಾರ
ಬೆಂಗಳೂರು: ನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇನ್ನು ಮುಂದೆ ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ ಶಾಲು ಹೂವಿನ ಗುಚ್ಛಗಳನ್ನು ಸ್ವೀಕರಿಸುವುದಿಲ್ಲ. ಒಂದು ವೇಳೆ ಪ್ರೀತಿಯಿಂದ ಕೊಡಬೇಕು ಎಂದಿದ್ದರೆ ಪುಸ್ತಕಗಳನ್ನು ನೀಡುವಂತೆ ತಿಳಿಸಿದ್ದಾರೆ.
ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬರುವವರು ಸಾವಿರಾರು ಮಂದಿ ದೊಡ್ಡ ದೊಡ್ಡ ಹೂಗುಚ್ಛಗಳನ್ನು ಹಿಡಿದುಕೊಂಡು ಹೋಗುತ್ತಾರೆ. ಮಾತ್ರವಲ್ಲದೇ ಪೇಟ ಶಲ್ಯ ಹಾರಗಳನ್ನು ತೆಗೆದುಕೊಂಡು ಹೋಗಿ ಹಾಕಿ ಅಭಿಮಾನ ತೋರಿಸುತ್ತಾರೆ. ಆದರೆ, ಗೂಗುಚ್ಛ ಒಂದು ಅಥವಾ ಎರಡು ದಿನಕ್ಕೆ ಹಾಳಾಗುತ್ತದೆ. ಇನ್ನು ಸಾಕಷ್ಟು ಶಲ್ಯಗಳು ಅನಗತ್ಯ ವ್ಯರ್ಥವಾಗುತ್ತವೆ. ಹೀಗಾಗಿಯೇ ಅನಗತ್ಯ ದುಂದು ವೆಚ್ಚ ಮಾಡದೇ ನಿಮ್ಮ ಪ್ರೀತಿಯನ್ನು ತೋರಿಸಿದರೆ ಸಾಕು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ನಿರ್ಧಾರಕ್ಕೆ ಬಂದಿರಬಹುದು. ಅದರ ಮೇಲೆಯೂ ಇಚ್ಛೆ ಇದ್ದರೆ ನನಗೆ ಪುಸ್ತಕಗಳನ್ನು ನೀಡಿ ಎಂದು ಅವರೇ ಹೇಳಿದ್ದಾರೆ.
ಪುಸ್ತಕಗಳಿದ್ದರೆ ಅದನ್ನು ಮತ್ತೊಬ್ಬರಿಗೆ ಓದಲು ನೀಡಬಹುದು. ಅಥವಾ ಉಡುಗೊರೆ ರೂಪದಲ್ಲಿ ಮತ್ತೊಬ್ಬರಿಗೆ ಅಥವಾ ಶಾಲಾ ಕಾಲೇಜು ಅರ್ಹ ಮಕ್ಕಳಿಗೆ ತಲುಪಿಸಬಹುದು. ಈ ಮೂಲಕ ಪುಸ್ತಕ ಅಭಿರುಚಿಯು ಹೆಚ್ಚಲಿದೆ. ಪುಸ್ತಕದಿಂದ ಜ್ಞಾನ ವಿಚಾರ ವಿನಿಮಯವಾಗಲಿದೆ ಎಂಬ ಮತ್ತೊಂದು ಉದ್ದೇಶವನ್ನು ನೂತನ ಮುಖ್ಯಮಂತ್ರಿಗಳು ಹೊಂದಿರಬಹುದು.