ಏರ್ ಇಂಡಿಯಾ ವಿಮಾನ ದುರಂತ; ಸಜೀವ ದಹನಗೊಂಡ 241 ಪ್ರಯಾಣಿಕರು; 5 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವು; ಪವಾಡ ಸದೃಶ ರೀತಿಯಲ್ಲಿ ಓರ್ವ ಪ್ರಯಾಣಿಕ ಬಚಾವ್! AAIBಯಿಂದ ತನಿಖೆ!

ಅಹ್ಮದಾಬಾದ್: ಅಹ್ಮದಾಬಾದ್ ನಲ್ಲಿ ಪತನವಾದ ಏರ್ ಇಂಡಿಯಾ ವಿಮಾನ ದುರಂತ ಘಟನೆಯಲ್ಲಿ ಓರ್ವ ಪ್ರಯಾಣಿಕನನ್ನು ಬಿಟ್ಟು ಯಾರೂ ಉಳಿದಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿದ್ದು, ವಿಮಾನ ಪ್ರಯಾಣಿಕರಲ್ಲದೇ 5 ಹಾಸ್ಟೆಲ್ ವಿದ್ಯಾರ್ಥಿಗಳೂ ಕೂಡ ಸಾವನ್ನಪ್ಪಿದ್ದಾರೆ.

ಗುಜರಾತ್ ರಾಜಧಾನಿ ಅಹಮದಾಬಾದ್ ಏರ್​ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿದೆ.

ಏರ್​ಪೋರ್ಟ್ ಬಳಿ ಮೇಧಿನಿ ನಗರ್​ನಲ್ಲಿ ಈ ಘಟನೆ ಸಂಭವಿಸಿದ್ದು ಬೋಯಿಂಗ್ 787-8 ಡ್ರೀಮ್‌ಲೈನರ್ (AI-171) ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು ಎನ್ನಲಾಗಿದೆ.

ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲೆ ಬಿದ್ದಿದೆ.

ಈ ದುರಂತದಲ್ಲಿ ಒಟ್ಟು 246 ಮಂದಿ ಸಾವಿಗೀಡಾಗಿದ್ದು, ಈ ಪೈಕಿ 229 ವಿಮಾನ ಪ್ರಯಾಣಿಕರು, 10 ಮಂದಿ ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ ( ಮುಖ್ಯ ಪೈಲಟ ಸುಮಿತ್ ಸಭರ್ವಾಲ್ ಮತ್ತು ಕೋ ಪೈಲಟ್ ಕ್ಲೈವ್‌ ಕುಂದರ್‌) ಗಳು ಸೇರಿದ್ದರು.

ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂದು ತಿಳಿದುಬಂದಿದೆ.

ಇದಲ್ಲದೆ ವಿಮಾನ ಢಿಕ್ಕಿಯಾದ ಬಿಜೆ ವೈದ್ಯಕೀಯ ಕಾಲೇಜಿನ 5 ಮಂದಿ ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ದುರಂತ ನಡೆದ ಸಂದರ್ಭದಲ್ಲಿ ವಿಮಾನ ಕೇವಲ 825 ಅಡಿ ಎತ್ತರದಲ್ಲಿತ್ತು ಎನ್ನಲಾಗಿದೆ.

ಇದೇ ದುರಂತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ವಿಜಯ್ ರೂಪಾನಿ ಅವರು ಕುಟುಂಬ ಸದಸ್ಯರ ಭೇಟಿ ಮಾಡಲು ಲಂಡನ್ ತೆರಳುತಿದ್ದರು ಎಂದು ತಿಳಿದುಬಂದಿದೆ.

ಸಹಾಯವಾಣಿ ಆರಂಭ

ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂರವಾಣಿ ಸಂಖ್ಯೆಯನ್ನು ತೆರೆಯಲಾಗಿದೆ ಎಂದು ವಿಮಾನಯಾನ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಏರ್ ಇಂಡಿಯಾ ಹಾಟ್​ಲೈನ್ ಸಂಖ್ಯೆ ಬಿಡುಗಡೆ

ಇತ್ತ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಕೂಡ ಹಾಟ್​ಲೈನ್ ಸಂಖ್ಯೆ ಬಿಡುಗಡೆ ಮಾಡಿದ್ದು, ಹೆಚ್ಚಿನ ಮಾಹಿತಿ ನೀಡಲು ನಾವು 1800 5691 444 ಎಂಬ ಪ್ರಯಾಣಿಕರ ಹಾಟ್‌ಲೈನ್ ಸಂಖ್ಯೆಯನ್ನು ಸಹ ಸ್ಥಾಪಿಸಿದ್ದೇವೆ ಎಂದು ತಿಳಿಸಿದೆ.

AAIBಯಿಂದ ತನಿಖೆ

ಏರ್‌ ಇಂಡಿಯಾ ವಿಮಾನ AI-171 ಕುರಿತು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ತನಿಖೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಎಐಬಿ ಮಹಾನಿರ್ದೇಶಕ ಮತ್ತು ಸಂಸ್ಥೆಯ ತನಿಖಾ ನಿರ್ದೇಶಕ ಸೇರಿದಂತೆ ಇತರರು ಅಹಮದಾಬಾದ್‌ಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ವಾಯು ಪ್ರದೇಶದಲ್ಲಿ ಸಂಭವಿಸುವ ವಿಮಾನಗಳ ಅಪಘಾತ ಮತ್ತು ಗಂಭೀರ ಸ್ವರೂಪದ ಘಟನೆಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳ ವಿಂಗಡನೆಯ ಹೊಣೆ ಎಎಐಬಿಯದ್ದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಅಪಘಾತಗಳ ಕುರಿತು ಸಮಗ್ರ ತನಿಖೆ ನಡೆಸಲಿರುವ ಎಎಐಬಿ, ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು ನಿರ್ದೇಶನ ನೀಡಲಿದೆ.