ಅಮೆರಿಕಾಗೆ ತಿರುಗೇಟು ನೀಡಿದ ಇರಾನ್; ಖತರ್‌ನಲ್ಲಿರುವ ಅಮೇರಿಕಾದ ನೆಲೆಗಳ ಮೇಲೆ 6 ಕ್ಷಿಪಣಿ ದಾಳಿ ಮಾಡಿದ ಇರಾನ್


ನವದೆಹಲಿ: ಇಸ್ರೇಲ್‌ ಜೊತೆಗಿನ ಯುದ್ಧದಲ್ಲಿ ಅಮೆರಿಕ ಭಾಗಿಯಾಗಿದ್ದು ಮಾತ್ರವಲ್ಲದೆ, ತನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಮಾಡಿದ್ದರಿಂದ ಆಕ್ರೋಶಗೊಂಡಿರುವ ಇರಾನ್‌, ಅಮೆರಿಕದ ವಿರುದ್ಧವೂ ಮುಗಿಬಿದ್ದಿದೆ. ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಖತರ್‌ನಲ್ಲಿರುವ ಅಮೇರಿಕಾದ  ನೆಲೆಗಳ ಮೇಲೆ 6 ಕ್ಷಿಪಣಿಗಳನ್ನು ಹಾರಿಸಿದೆ ಎಂದು ಅಮೆರಿಕದ ಮಾಧ್ಯಮಗಳನ್ನು ಉಲ್ಲೇಖಿಸಿ ರಾಯಿಟರ್ಸ್‌ ವರದಿ ಮಾಡಿದೆ.

ಕತಾರ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಅತಿದೊಡ್ಡ ನೆಲೆಯಾದ ಅಲ್ ಉದೈದ್ ವಾಯುನೆಲೆಯನ್ನು ಹೊಂದಿದೆ, ಇದು ಅಮೆರಿಕದ ಕೇಂದ್ರ ಕಮಾಂಡ್‌ನ ಮುಂಚೂಣಿ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುಮಾರು 10,000 ಸೈನಿಕರು ಈ ಸೇನಾ ನೆಲೆಯಲ್ಲಿ ಇದ್ದಾರೆ. ಇರಾನ್ ಈ ನೆಲೆಯನ್ನು ಗುರಿಯಾಗಿ ಗುರುತಿಸಿದೆ ಎಂದು ಪಾಶ್ಚಿಮಾತ್ಯ ರಾಜತಾಂತ್ರಿಕರೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಪಶ್ಚಿಮದಲ್ಲಿ ಈಜಿಪ್ಟ್‌ನಿಂದ ಪೂರ್ವದಲ್ಲಿ ಕಝಾಕಿಸ್ತಾನ್‌ವರೆಗೆ ವಿಸ್ತರಿಸಿರುವ ವಿಶಾಲವಾದ ಭೂಪ್ರದೇಶದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳನ್ನು ಅದು ನಿರ್ದೇಶಿಸುತ್ತದೆ. ಸಂಭಾವ್ಯ ಇರಾನಿನ ದಾಳಿಗಳಿಗೆ ಇದು ಗುರಿಯಾಗಬಹುದಾದ್ದರಿಂದ ಪೆಂಟಗನ್ ಈ ವಾಯುನೆಲೆಯಿಂದ ವಿಮಾನಗಳನ್ನು ತೆಗೆದುಹಾಕಿದೆ ಎಂದು ರಾಯಿಟರ್ಸ್ ಕಳೆದ ವಾರ ವರದಿ ಮಾಡಿದೆ. ಇರಾನ್‌ನ ಕ್ಷಿಪಣಿ ದಾಳಿಯ ಬೆನ್ನಲ್ಲಿಯೇ ಕತಾರ್‌ ರಾಜಧಾನಿ ದೋಹಾದಲ್ಲಿ ಭಾರೀ ಪ್ರಮಾಣದ ಸ್ಫೋಟದ ಶಬ್ದಗಳು ಕೇಳಿ ಬಂದಿವೆ. ದೋಹಾದಲ್ಲಿ ಹಲವಾರು ಕಡೆಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದವು ಎಂದು ರಾಯಿಟರ್ಸ್‌ಗೆ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.