ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ನ ನಂದಿಗ್ರಾಮ ಅಭ್ಯರ್ಥಿ ಬಂಧನ

ಕೋಲ್ಕತ್ತಾ: ಮಾಜಿ ಸಿಎಂ ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಮಿಲನ್ ಪ್ರಧಾನ್ ( Milan Pradhan) ಅವರನ್ನು ಅರೆಸ್ಟ್‌ ಮಾಡಲಾಗಿದೆ.

ಹಳೆಯ ಕೊಲೆ ಕೇಸ್‌ವೊಂದರ ಸಂಬಂಧ ಇದೀಗ ಕಾಂಗ್ರೆಸ್‌ (Congress) ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 

ಅ.6ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಿಲನ್ ಪ್ರಧಾನ್ ಕಣಕ್ಕಿಳಿದಿದ್ದರು. ಈ ವೇಳೆ ಪ್ರಧಾನ್‌ ಅವರಿಗೆ ತಮ್ಮ ಬಣ ಬೆಂಬಲ ಸೂಚಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಭೇಟಿ ಬಳಿಕ ಟಿಎಂಸಿ ಬಣದ ಅಭ್ಯರ್ಥಿ ಸಂಚಿತಾ ದೇ ಪ್ರಧಾನ ತಮ್ಮ ನಾಮಪತ್ರ ವಾಪಸ್‌ ಪಡೆದ ಬಳಿಕ ತಮ್ಮ ಕಾಳಿಘಾಟ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿಯನ್ನು ತಮ್ಮ ಬಣ ಬೆಂಬಲಿಸಲಿದೆ ಎಂದು ಘೋಷಿಸಿದ್ದರು.

ಕಾಂಗ್ರೆಸ್ ತನ್ನ ಸಹೋದರ ಪಕ್ಷ ಎಂದು ಬಣ್ಣಿಸಿದ ದೀದಿ ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ನಮ್ಮ ಬಣವು ಈ ಹಿಂದೆ ನಂದಿಗ್ರಾಮದಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಲು ನಿರ್ಧರಿಸಿತ್ತು ಮತ್ತು ಇದು ಭವಿಷ್ಯದ ಆರಂಭ. ಬಂಗಾಳದಿಂದಲೇ ಇಂಡಿಯಾ ಒಕ್ಕೂಟವನ್ನು ಬಲಪಡಿಸುವ ಸಂದೇಶ ಪ್ರಾರಂಭವಾಗಲಿ ಎಂದಿದ್ದರು.