ಕಣ್ಣೂರು ಅಲ್ ಬಿರ್ರ್ ಸ್ಕೂಲ್ ನಲ್ಲಿ 'ಮೆಹಫಿಲೇ ಮೀಲಾದ್' ಸ್ಪರ್ಧಾ ಕಾರ್ಯಕ್ರಮ
ಮಂಗಳೂರು: ಇಲ್ಲಿನ ಅಡ್ಯಾರ್ ಕಣ್ಣೂರು ಅಲ್ ಬಿರ್ರ್ ಇಸ್ಲಾಮಿಕ್ ಫ್ರೀ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ 'ಮೆಹಫಿಲೇ ಮೀಲಾದ್' ಸ್ಪರ್ಧಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಫಾ ಮತ್ತು ಮರ್ವ ಎರಡು ತಂಡಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಮರ್ವ ತಂಡವು ಚಾಂಪಿಯನ್ ಪಟ್ಟ ಪಡೆಯಿತು.
ಶಾಲಾ ಅಧ್ಯಕ್ಷರಾದ ಎಸ್.ಮುಹಮ್ಮದ್ ಹಾಜಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅಲ್ ಬಿರ್ರ್ ಫ್ರೀ ಸ್ಕೂಲ್ ಇದರ ಸಂಪನ್ಮೂಲ ವ್ಯಕ್ತಿಯಾದ ರಫೀಕ್ ಮಾಸ್ಟರ್, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮಹತ್ತರವಾದದ್ದು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಪೋಷಕರು ಮುತುವರ್ಜಿ ವಹಿಸಬೇಕು ಎಂದು ಹೇಳಿದರು. ಜನಪ್ರಿಯ ಆಸ್ಪತ್ರೆಯ ಡೈರೆಕ್ಟರ್ ಡಾ.ಕಿರಾಷ್ ಪರ್ತಿಪ್ಫಾಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಲಾ ಪ್ರಧಾನ ಕಾರ್ಯದರ್ಶಿ ಉಮರಬ್ಬ ಉಪಸ್ಥಿತಿಯಲ್ಲಿ ಅಲ್ ಬಿರ್ರ್ ಕೋಡಿನೇಟರ್ ಸಿತಾರ್ ಅಬ್ದುಲ್ ಮಜೀದ್ ಹಾಜಿ ಸ್ವಾಗತಿಸಿದರು. ಶಾಲಾ ಸಂಚಾಲಕ ರಿಯಾಝ್ ಅಹ್ಮದ್ ಧನ್ಯವಾದ ಗೈದು, ಇರ್ಫಾನ್ ಅಸ್ಲಮಿ ಕಾರ್ಯಕ್ರಮ ನಿರೂಪಣೆ ಮಾಡಿದರು.

