SSLC ಪರೀಕ್ಷೆಯಲ್ಲಿ ಬರೋಬ್ಬರಿ 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ!

ಬೆಂಗಳೂರು: 2025-26ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಫಲಿತಾಂಶದ ಮೂಲಕ ಕರ್ನಾಟಕ ಈ ಸಲ ಹೊಸ ದಾಖಲೆ ಬರೆದಿದೆ. ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ.85.06 ಫಲಿತಾಂಶದೊಂದಿಗೆ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಇನ್ನು ಒಂದೆರಡಲ್ಲ ಬರೋಬ್ಬರಿ 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಣವೆಬಿಳಚಿ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಕಾನ್ವೆಂಟ್ ಸ್ಕೂಲ್ ವಿದ್ಯಾರ್ಥಿ ಭರತ್‌ 625ಕ್ಕೆ 625 ಅಂಕ ಪಡೆದಿದ್ದಾರೆ. ಇವರು ಬಿಲ್ಡಿಂಗ್ ಕಾಂಟ್ರ್ಯಾಕ್ಟರ್ ಆಗಿರುವ ಗಿರೀಶ್‌ರಾವ್ ಮತ್ತು ಶಿಲ್ಪಾ ದಂಪತಿಯ ಪುತ್ರ.

ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸ್​​ಫರ್ಡ್​ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸೌಜನ್ಯಾ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿನಿಯ ಸಾಧನೆಗೆ ಶಾಲಾ ಆಡಳಿತ ಅಧಿಕಾರಿ ದರ್ಶನಗೌಡ ಪಾಟೀಲ್, ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮಣಿಯಾರ, ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕ ಮಂಜುನಾಥ ಮಂಕಣಿ ಹಾಗೂ ಶಿಕ್ಷಕ ವರ್ಗ ಅಭಿನಂದನೆ ಸಲ್ಲಿಸಿದೆ.

ಕುಂದಾಪುರ ತಾಲೂಕಿನ ಶಂಕರ್ ನಾರಾಯಣದ ಮದರ್ ತೆರೇಸಾ ಮೆಮೊರೇಬಲ್ ಶಂಕರ್ ನಾರಾಯಣ ಪ್ರೌಢಶಾಲೆಯ ವಿದ್ಯಾರ್ಥಿ ಪ್ರೀತಂ ಜಿ. ಪೂಜಾರಿ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ರ್ಯಾಂಕ್​​ ಪಡೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಶಾಲೆಯ ಪ್ರಾರ್ಥನಾ ಬಿರಾದಾರ ಕೂಡ 625ಕ್ಕೆ 625ಅಂಕ ಪಡೆದು ನಾವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ. ಪ್ರಾರ್ಥನಾಳ ಈ ಸಾಧನೆಗೆ ಕುಟುಂಬ ಮತ್ತು ಶಾಲೆ ಸಂತಸ ವ್ಯಕ್ತಪಡಿಸಿವೆ.

ಚಿಕ್ಕಮಗಳೂರಿನ ಬೃಂದಾ, ಬೆಂಗಳೂರು ಉತ್ತರ ಧನುಷ್​ ಮತ್ತು ರಾಯಚೂರಿನ ವಿದ್ಯಾರ್ಥಿ ಸುಖದೇವ್​​ ಕೂಡ 625ಕ್ಕೆ 625 ಅಂಕ ಪಡೆಯುವ ಮೂಲಕ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್​​ ಪಡೆದು ಕುಟುಂಬ ಮತ್ತು ಶಾಲೆ ಸೇರಿದಂತೆ ಊರಿಗೆ ಕೀರ್ತಿ ತಂದಿದ್ದಾರೆ.