ಸಿದ್ದರಾಮಯ್ಯರ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ, ಜನಪರ ಆಡಳಿತ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಸಿದ್ದರಾಮಯ್ಯ  ನಮ್ಮ ಮಾರ್ಗದರ್ಶಕರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ನಾಯಕರು. 2013ರಲ್ಲಿ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅವರು, ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸುವ ಮೂಲಕ ಬಸವಣ್ಣನವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದರು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಿರುವ ಖಂಡ್ರೆ, ರೈತರ ಸಾಲಮನ್ನಾ, ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವು ಜನಪರ ಯೋಜನೆಗಳ ಮೂಲಕ ಸರ್ವಜನ ಹಿತಾಯ, ಸರ್ವಜನ ಸುಖಾಯ ಎಂಬ ಧ್ಯೇಯದೊಂದಿಗೆ ಆಡಳಿತ ನಡೆಸಿದ ಶ್ರೀ ಸಿದ್ದರಾಮಯ್ಯ ಅವರು ನಮಗೆ ನೀಡಿದ ಮಾರ್ಗದರ್ಶನ ಮತ್ತು ಸಲಹೆಗಳು ಸದಾ ಅಮೂಲ್ಯವಾಗಿವೆ ಎಂದಿದ್ದಾರೆ. 

ರಾಜ್ಯದ ಇತಿಹಾಸದಲ್ಲೇ ದಾಖಲೆಯ 17 ಬಜೆಟ್‌ಗಳನ್ನು ಮಂಡಿಸಿದ ಅಪರೂಪದ ಸಾಧನೆ ಅವರದ್ದು. ಸುಮಾರು ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಬಡವರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದ ವರ್ಗಗಳು ಹಾಗೂ ಸಮಾಜದ ಎಲ್ಲ ವರ್ಗಗಳ ಜನರ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ ನಾವು ಮನವಿ ಸಲ್ಲಿಸಿದಾಗ ಅದಕ್ಕೆ ತಕ್ಷಣ ಸ್ಪಂದಿಸಿ ಅಧಿಕೃತ ಘೋಷಣೆ ಮಾಡಿದ ಶ್ರೀ ಸಿದ್ದರಾಮಯ್ಯ ಅವರು, ಬಸವಾದಿ ಶರಣರ ಪುಣ್ಯಭೂಮಿ ಬಸವಕಲ್ಯಾಣದಲ್ಲಿ ಅತ್ಯಾಧುನಿಕ ಅನುಭವ ಮಂಟಪ ನಿರ್ಮಾಣಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ ₹280 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ತಮ್ಮ ಬಸವಾಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ₹5,000 ಕೋಟಿ ವಿಶೇಷ ಅನುದಾನ ಒದಗಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.

2013ರ ಮೊದಲು ಪ್ರಬಲ ವಿರೋಧ ಪಕ್ಷದ ನಾಯಕರಾಗಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ ಅವರ ಹೋರಾಟದ ಮನೋಭಾವ ಎಲ್ಲರಿಗೂ ಸ್ಫೂರ್ತಿದಾಯಕವಾಗಿತ್ತು. ವಿಧಾನಸಭೆಯಲ್ಲಿ ವಿಷಯಗಳ ಕುರಿತು ಅವರಿಗಿದ್ದ ಆಳವಾದ ಜ್ಞಾನ, ಅದ್ಭುತ ನೆನಪಿನ ಶಕ್ತಿ ಹಾಗೂ ವಾದ ಮಂಡಿಸುವ ಸಾಮರ್ಥ್ಯ ಪ್ರತಿಪಕ್ಷಗಳನ್ನೂ ಹಲವು ಬಾರಿ ಮೌನಗೊಳಿಸುತ್ತಿತ್ತು.

ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾರ್ಯನಿರ್ವಹಿಸಿ ಕರುನಾಡಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸಿದ ಜನಪ್ರಿಯ ನಾಯಕ ಸಿದ್ದರಾಮಯ್ಯ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

 ಮುಖ್ಯಮಂತ್ರಿಯಾಗಿ ಅವರು ಸಲ್ಲಿಸಿದ ಸೇವೆ, ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಮತ್ತು ಜನಪರ ಆಡಳಿತ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ನಿಮ್ಮ ಅಮೂಲ್ಯ ಸೇವೆಯನ್ನು ಕರುನಾಡು ಸದಾ ಸ್ಮರಿಸುತ್ತದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.