ಇಬ್ಬರು ಅಪರಿಚಿತರಿಂದ ಕೃತ್ಯ; ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಬಸ್ ಪತ್ತೆ
ಉಡುಪಿ: ನಗರದ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಶ್ರೀ ದುರ್ಗಾಂಬ ಬಸ್‌ವೊಂದು ಕಳವಾಗಿರುವ ಘಟನೆ ಸೆ.29ರಂದು ಬೆಳಕಿಗೆ ಬಂದಿದೆ. ಕಳವಾದ ಬಸ್ ಅನ್ನು ಪೊಲೀಸರು ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಕಟ್‌ಬೆಳ್ತೂರು ನಿವಾಸಿ ಕೃಷ್ಣ (51) ಅವರು ನೀಡಿದ ದೂರಿನಂತೆ, ಕೆಎ 20 ಎಡಿ 1931 ನೋಂದಣಿ ಸಂಖ್ಯೆಯ ಶ್ರೀ ದುರ್ಗಾಂಬ ಬಸ್‌ನ ನಿರ್ವಾಹಕರಾಗಿದ್ದಾರೆ. ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಸೆ.28ರಂದು ರಾತ್ರಿ 9.48ರ ಸುಮಾರಿಗೆ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗ ಬಸ್ ನಿಲ್ಲಿಸಲಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಇಬ್ಬರೂ ಸ್ಕೂಟರ್‌ನಲ್ಲಿ ತೆರಳಿದ್ದರು. ಮರುದಿನ ಬೆಳಿಗ್ಗೆ ಎಂದಿನಂತೆ ಬಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ ಬಸ್ ಕಾಣೆಯಾಗಿರುವುದು ಗೊತ್ತಾಗಿದೆ.
ಯಾರೋ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಬಸ್ ಕಳವು ಮಾಡಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಬಸ್‌ನ ಅಂದಾಜು ಮೌಲ್ಯ ₹40 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಳವಾದ ಬಸ್‌ಗಾಗಿ ಶೋಧ ನಡೆಸಿದಾಗ, ಸೆ.29ರ ಮುಂಜಾನೆ ಸುಮಾರು 2 ಗಂಟೆಗೆ ಇಬ್ಬರು ಅಪರಿಚಿತರು ಸ್ಕೂಟರ್‌ನಲ್ಲಿ ಚಿಟ್ಪಾಡಿಯ ಹನುಮಾನ್ ಗ್ಯಾರೇಜ್‌ಗೆ ಬಂದಿರುವುದು ಸೇರಿದಂತೆ ಲಭ್ಯ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಸಿದ್ದಾರೆ. ಕಳವು ಮಾಡಿದ ಬಸ್ ಅನ್ನು ಮುದುರಂಗಡಿ ಸಮೀಪದ ಮುದ್ದಾಡಿ ಹಾಡಿಯಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದ್ದು, ಪೊಲೀಸರು ಬಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
