ನಂಚಾರಿನ ಕಾಮಧೇನು ಗೋಶಾಲಾದಲ್ಲಿ ವಿವಿಧ ಯೋಜನೆ ಸೆ.20ರಂದು ಚಾಲನೆ

ಉಡುಪಿ: ನಂಚಾರಿನ ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್‌ ವತಿಯಿಂದ ವಿವಿಧ ಸೇವಾ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಗೋಪ್ರಿಯರು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಟ್ರಸ್ಟ್‌ ಅಧ್ಯಕ್ಷ ರಾಜೇಂದ್ರ ಚಕ್ಕೇರಾ ಮನವಿ ಮಾಡಿದರು.

ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ 2022ರ ಜನವರಿ 24ರಂದು 12 ದನಗಳಿಂದ ಆರಂಭವಾದ ಗೋಶಾಲೆಯಲ್ಲಿ ಇದೀಗ ಸುಮಾರು 370 ದನಗಳಿಗೆ ಆಶ್ರಯ ನೀಡಲಾಗಿದೆ. ಬೀಡಾಡಿ, ವಯೋವೃದ್ಧ, ಗಾಯಗೊಂಡ ಹಾಗೂ ಕಸಾಯಿಖಾನೆಯಿಂದ ರಕ್ಷಿಸಲಾದ ಗಂಡು–ಹೆಣ್ಣು ದನಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತಿದೆ ಎಂದರು.

ಗೋಶಾಲೆಯ ನಿರ್ವಹಣಾ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕ ಬ್ಯಾಂಕ್ ಸೇರಿದಂತೆ ವಿವಿಧ ಸಂಘ–ಸಂಸ್ಥೆಗಳು ಹಾಗೂ ಗೋಪ್ರಿಯರು ನೆರವು ನೀಡುತ್ತಿದ್ದಾರೆ. ಉಡುಪಿಯ ಗೋಗ್ರಾಸ ತಂಡವೂ ಬೆಂಬಲ ನೀಡುತ್ತಿದೆ ಎಂದು ತಿಳಿಸಿದರು.

ಗೋಶಾಲೆಯಲ್ಲಿ ಸ್ಥಾಯಿ ಹೊಂಡ, ಹಸಿರು ಹುಲ್ಲಿನ ವ್ಯವಸ್ಥೆ, ಕರುಗಳಿಗೆ ಪ್ರತ್ಯೇಕ ವ್ಯವಸ್ಥೆ ಹಾಗೂ ಗೋ ದಾನಕ್ಕಾಗಿ ಕೊಠಡಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಸೆ.20ರಂದು ಕೋಟ ಶ್ರೀನಿವಾಸ ಪೂಜಾರಿ, ಯಶಪಾಲ್ ಸುವರ್ಣ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಗೋ ದತ್ತು ಹಾಗೂ ಗೋ ದಾನ ಸೇವೆಯನ್ನೂ ಆರಂಭಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರಾಮಕೃಷ್ಣಾಚಾರ್, ಅಶೋಕ್ ಹರೀಶ್ ಹಾಗೂ ಶಶಿಧರ್ ಭಟ್ ಉಪಸ್ಥಿತರಿದ್ದರು.